ಚಿನ್ನ ಕ್ಷಮಾದಾನ ಯೋಜನೆ ಜಾರಿಗೆ ಕೇಂದ್ರದ ಚಿಂತನೆ

ನವದೆಹಲಿ, ಆ ೧- ಚಿನ್ನದ ಕ್ಷಮಾದಾನ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಚಿತ್ತ ಹರಿಸಿದೆ. ಈ ಹಿಂದೆ ಚಿನ್ನದ ಕ್ಷಮಾಧಾನ ಯೋಜನೆಯನ್ನು ಜಾರಿಗೊಳಿಸುವ ಚರ್ಚೆಗಳು ನಡೆದಿದ್ದವಾದರೂ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಕೊರೊನಾ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಚಿನ್ನದ ಕ್ಷಮಾದಾನ ಯೋಜನೆ ಜಾರಿ ಮತ್ತೆ ಮುನ್ನೆಲೆಗೆ ಬಂದಿದೆ.
ಕೊರೊನಾದಿಂದ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವಾಗಲೇ ಸಂಪನ್ಮೂಲ ಸಂಗ್ರಹಕ್ಕೆ ವಿವಿಧ ಮೂಲಗಳ ಹುಡುಕಾಟದಲ್ಲಿ ತೊಡಗಿರುವ ಕೇಂದ್ರ ಹಣಕಾಸು ಇಲಾಖೆ ಟಿಜೋರಿ ತುಂಬಿಕೊಳ್ಳಲು ನಾಗರಿಕರ ಚಿನ್ನಕ್ಕೆ ತೆರಿಗೆ ಮತ್ತು ದಂಡ ವಿಧಿಸುವ ಪ್ರಸ್ತಾವವನ್ನು ಪ್ರಧಾನಿ ಮೋದಿ ಅವರ ಮುಂದಿಟ್ಟಿದೆ.
ನಾಗರಿಕರ ಚಿನ್ನಕ್ಕೆ ತೆರಿಗೆ ಮತ್ತು ದಂಡ ವಿಧಿಸುವ ತೀರ್ಮಾನ ಈಗ ಪ್ರಧಾನಿ ಮೋದಿ ಅವರ ವಿವೇಚನೆಗೆ ಬಿಡಲಾಗಿದೆ.
ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಬರಿದಾಗಿರುವ ಬೊಕ್ಕಸ ತುಂಬಿಕೊಳ್ಳಲು ಕೇಂದ್ರ ಸರ್ಕಾರ ನಾಗರಿಕರ ಚಿನ್ನದ ಮೇಲೆ ಕಣ್ಣು ಹಾಕಿದೆ. ಜನ ತಮ್ಮ ಬಳಿ ಎಷ್ಟು ಚಿನ್ನ ಇದೆ ಎಂಬುದನ್ನು ಘೋಷಿಸಿಕೊಳ್ಳಬೇಕು. ತೆರಿಗೆ ಕಟ್ಟದ ಚಿನ್ನ ಅಥವಾ ದಾಖಲೆ ಇಲ್ಲದ ಚಿನ್ನ ಇದ್ದರೆ ಅದಕ್ಕೆ ತೆರಿಗೆ ಮತ್ತು ದಂಡವನ್ನು ಕಟ್ಟಬೇಕು ಎಂಬ ಪ್ರಸ್ತಾವವನ್ನು ಹಣಕಾಸು ಇಲಾಖೆ ಪ್ರಧಾನಿ ಮೋದಿ ಅವರ ಮುಂದಿಟ್ಟಿದೆ.
ಸದ್ಯ ಚಿನ್ನದ ಕ್ಷಮಾದಾನ ಯೋಜನೆ ಜಾರಿಗೊಳಿಸುವ ಬಗ್ಗೆ ಪ್ರಧಾನಿ ಮೋದಿ ಅವರು ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈ ಯೋಜನೆ ಇನ್ನು ಪ್ರಾಥಮಿಕ ಹಂತದಲ್ಲೇ ಇದ್ದು, ಪ್ರಧಾನಿ ಮೋದಿ ಅವರು ಎಲ್ಲರ ಜತೆ ಚರ್ಚಿಸಿದ ನಂತರವೇ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಲಾಗಿದೆ.
ಚಿನ್ನದ ಮೇಲೆ ತೆರಿಗೆ ಮತ್ತು ದಂಡ ವಿಧಿಸುವ ಕೇಂದ್ರ ಸರ್ಕಾರದ ಪ್ರಸ್ತಾಪಕ್ಕೆ ಬಹು ಹಿಂದಿನಿಂದಲೂ ಸಾರ್ವಜನಿಕವಾಗಿ ವಿರೋಧ ಮತ್ತು ನಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹಾಗಾಗಿಯೇ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಲು ಮೀನಾಮೇಷ ಎಣಿಸಿತ್ತು. ಈಗಲೂ ಈ ಯೋಜನೆ ಜಾರಿಗೊಳಿಸಿದರೆ ಸಾರ್ವಜನಿಕವಾಗಿ ವಿರೋಧ ವ್ಯಕ್ತವಾಗುವುದನ್ನು ತಳ್ಳಿ ಹಾಕುವಂತಿಲ್ಲ.