ಚಿನ್ನ ಕಳ್ಳಸಾಗಾಣಿಕೆ ಪಿಣರಾಯಿಗೆ ಪೀಕಲಾಟ

ತಿರುವನಂತಪುರಂ, ನ. ೩- ದೇಶದಲ್ಲಿ ಸುದ್ದಿ ಮಾಡಿರುವ ಕೇರಳದ ಚಿನ್ನ ಕಳ್ಳಸಾಗಾಣಿಕೆ ಪ್ರಕರಣ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ತನಿಖೆ ಭೀತಿ ಎದುರಿಸುವಂತಾಗಿದೆ.

ಮುಖ್ಯಮಂತ್ರಿಗಳ ಮಾಜಿ ಕಾರ್ಯದರ್ಶಿ ಶಿವಶಂಕರ್ ಅವರನ್ನು ಬಂಧಿಸಿರುವ ಜಾರಿ ನಿರ್ದೇಶನಾಲಯ ಅವರಿಂದ ಮಹತ್ವದ ಮಾಹಿತಿ ಕಲೆ ಹಾಕಿದೆ. ಹೀಗಾಗಿ ಮುಖ್ಯಮಂತ್ರಿ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಪಿಣರಾಯಿ ವಿಜಯನ್ ಅವರಿಗೆ ಆತಂಕ ಎದುರಾಗಿದೆ.

ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಮಹತ್ವದ ಮೂಲಸೌಕರ್ಯ ಯೋಜನೆಗಳ ಕುರಿತು ಜಾರಿ ನಿರ್ದೇಶನಾಲಯ ವಿವರ ಕೋರಿದ್ದು ಇದು ಕೂಡ ಅವರಿಗೆ ಮುಳುವಾಗುವ ಸಾಧ್ಯತೆಗಳಿವೆ.

ಸರಿಯಾಗಿ ತನಿಖೆ ಮಾಡುತ್ತಿಲ್ಲ:

ಚಿನ್ನ ಕಳ್ಳಸಾಗಣೆ ಪ್ರಕರಣದ ಕುರಿತು ಕೇಂದ್ರ ತನಿಖಾ ಸಂಸ್ಥೆಗಳು ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸುತ್ತಿಲ್ಲ ಅದರ ಬದಲು ವ್ಯಾಪ್ತಿ ಮೀರಿ, ರಾಜಕೀಯವಾಗಿ ವರ್ತಿಸುತ್ತಿವೆ ಎಂದು ಮುಖ್ಯಮಂತ್ರಿ ಪಿನರಾಯಿ ವಿಜಯನ್ ಆರೋಪಿಸಿದ್ದಾರೆ.

ಪ್ರತಿ ಪಕ್ಷಗಳ ತಿರುಗೇಟು:

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ತನಿಖೆ ತಮ್ಮ ಬುಡಕ್ಕೆ ಬರಬಹುದು ಎನ್ನುವ ಭೀತಿಯಿಂದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತನಿಖಾ ಸಂಸ್ಥೆಗಳ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿತಲ ಆರೋಪಿಸಿದ್ದಾರೆ.

ಯಾವುದೇ ಕ್ಷಣದಲ್ಲಿ ತನಿಖಾ ಸಂಸ್ಥೆಗಳು ಮುಖ್ಯಮಂತ್ರಿಗಳ ಕಚೇರಿಗೆ ಆಗಮಿಸಬಹುದು ಎನ್ನುವ ಸುಳಿವು ಪಿಣರಾಯಿ ವಿಜಯನ್ ಅವರಿಗೆ ಸಿಕ್ಕಿದೆ. ಈ ಕಾರಣದಿಂದಾಗಿಯೇ ಅವರು ತನಿಖಾ ಸಂಸ್ಥೆಗಳ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಈ ಮುಂಚೆ ತನಿಖಾ ಸಂಸ್ಥೆಗಳಿಗೆ ಉತ್ತಮ ಎಂದು ಅವರು ಪ್ರಮಾಣಪತ್ರ ನೀಡಿದ್ದರು ಈಗ ಅದರ ವಿರುದ್ಧವೇ ಆರೋಪ ಮಾಡುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.

ಸರಿಯಾದ ದಿಕ್ಕಿನಲ್ಲಿ ತನಿಖೆ:
ಈ ಕುರಿತು ಪ್ರತಿಕ್ರಿಯಿಸುವ ಕೇರಳ ಬಿಜೆಪಿ ಘಟಕದ ಅಧ್ಯಕ್ಷ ಕೆ ಸುರೇಂದ್ರನ್ ಅವರು, ಚಿನ್ನ ಕಳ್ಳಸಾಗಣೆ ಪ್ರಕರಣ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಹೇಳಿದ್ದಾರೆ.

ಮನವಿಯ ಮೇರೆಗೆ ರಾಷ್ಟ್ರೀಯ ತನಿಖಾ ದಳ ಕೇರಳಕ್ಕೆ ಆಗಮಿಸಿದ ಎಂದು ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರು ಮಾಹಿತಿ ನೀಡಿದ್ದರು ತನಿಖೆ ತಮ್ಮ ಬುಡಕ್ಕೆ ಬರಲಿದೆ ಎನ್ನುವ ಕಾರಣದಿಂದ ತನಿಖಾ ಸಂಸ್ಥೆ ವಿರುದ್ಧ ಆರೋಪ ಮಾಡುತ್ತಿದ್ದಾರೆ ಇದು ಸರಿಯಲ್ಲ ಎಂದು ಹೇಳಿದ್ದಾರೆ.

ಚಿನ್ನ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭದಲ್ಲಿ ತನಿಖೆಯನ್ನು ಸ್ವಾಗತಿಸಿ ಇದೀಗ ತನಿಖೆ ವಿರುದ್ಧ ಮಾತನಾಡುತ್ತಿರುವುದು ಮುಖ್ಯಮಂತ್ರಿಗಳಿಗೆ ಶೋಬೆ ತರುವುದಿಲ್ಲ ಎಂದು ಅವರು ತಿಳಿಸಿದ್ದಾರೆ