ಚಿನ್ನ ಕಳವು ಪ್ರಕರಣ: ಆರೋಪಿಯ ಹೊಟ್ಟೆಯಲ್ಲಿ ೩೫ ಗ್ರಾಂ ಆಭರಣ ಪತ್ತೆ!

ಸುಳ್ಯ, ಮೇ ೩೧- ತಾಲೂಕಿನ ಚಿನ್ನಾಭರಣ ಮಳಿಗೆಯಿಂದ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಸಂಗತಿ ಇದೀಗ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿದ್ದ ಇಬ್ಬರು ಆರೋಪಿಗಳ ಪೈಕಿ ಓರ್ವನ ಹೊಟ್ಟೆಯೊಳಗೆ ಕಳವುಗೈದ ಚಿನ್ನ ಪತ್ತೆಯಾಗಿದೆ.

ಜ್ಯುವೆಲ್ಲರಿ ಅಂಗಡಿಯಿಂದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಠಾಣಾ ಪೊಲೀಸರು ತಂಗಚ್ಚನ್ ಹಾಗೂ ಶಿಬು ಎಂಬವರನ್ನು ಬಂಧಿಸಿದ್ದರು. ಈ ಪೈಕಿ ತಂಗಚ್ಚನ್ ನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಆದರೆ, ಮತ್ತೋರ್ವ ಆರೋಪಿ ಶಿಬು ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ನಡೆಸಿದ ವೇಳೆ ಆತನ ಕರುಳಿನಲ್ಲಿ ಚಿನ್ನಾಭರಣ ಪತ್ತೆಯಾಗಿದೆ. ಇನ್ನು ಆರೋಪಿ ಶಿಬು ತಾನು ಕಳವುಗೈದಿದ್ದ ಆಭರಣವನ್ನು ಸಾಕ್ಷ್ಯ ನಾಶಗೊಳಿಸುವ ಹಿನ್ನೆಲೆಯಲ್ಲಿ ಐಸ್ ಕ್ರೀಂ ನೊಂದಿಗೆ ಬೆರೆಸಿಕೊಂಡು ನುಂಗಿದ್ದ ಎಂದು ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ. ಆತನ ಹೊಟ್ಟೆಯಲ್ಲಿ ಸುಮಾರು ೩೫ ಗ್ರಾಂ ಚಿನ್ನಾಭರಣ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸುಳ್ಯ ಠಾಣಾ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.