ಚಿನ್ನಾಭರಣ ಕಳವು : ಅತ್ತೆ ಅಳಿಯನಿಗೆ ಪೊಲೀಸ್‌ರ ಆತಿಥ್ಯ

ಶಿವಮೊಗ್ಗ, ಜು. ೧೪: ಮನೆಯೊಂದರಿಂದ ಚಿನ್ನಾಭರಣ ಕಳವು ಮಾಡಿದ್ದ ಆರೋಪದ ಮೇರೆಗೆ, ಅತ್ತೆ ಹಾಗೂ ಅಳಿಯನನ್ನು ಜಿಲ್ಲೆಯ ಸೊರಬ ಠಾಣೆ ಪೊಲೀಸರು ಬಂಧಿಸಿರುವ ಘಟನೆ
ವರದಿಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರವಾಡ ಗ್ರಾಮದ ನಿವಾಸಿಗಳಾದ ಅಳಿಯ ಮರಿಯಪ್ಪ ಗೋಪಿನಾಯ್ಕ್ ಹಾಗೂ ಈತನ ಅತ್ತೆ ಕಮಲಮ್ಮ ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಇವರಿಂದ ೩೭ ಗ್ರಾಂ ತೂಕದ ಬಂಗಾರ ಹಾಗೂ ೨೦೦ ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಪ್ರಕರಣದ ಹಿನ್ನಲೆ: ಕಳೆದ ಕೆಲ ತಿಂಗಳುಗಳ ಹಿಂದೆ ಸೊರಬ ಪಟ್ಟಣದ ರಾಘವೇಂದ್ರ ಬಡಾವಣೆಯ ಮನೆಯೊಂದರಲ್ಲಿ ಕಳವು ಕೃತ್ಯ ನಡೆದಿತ್ತು. ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳರು ಈ ಕೃತ್ಯ ನಡೆಸಿದ್ದರು. ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇತ್ತೀಚೆಗೆ ಆರೋಪಿ ಮರಿಯಪ್ಪ ಗೋಪಿನಾಯ್ಕ್ ನು ಸೊರಬ ಪಟ್ಟಣದ ರಂಗನಾಥ ಸ್ವಾಮಿ ದೇವಾಲಯ ಸಮೀಪ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ. ಗಸ್ತಿನಲ್ಲಿದ್ದ ಪೊಲೀಸರನ್ನು ಕಂಡ ಪರಾರಿಯಾಗಲು ಯತ್ನಿಸಿದ್ದ. ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕಳವು ಕೃತ್ಯ ಬೆಳಕಿಗೆ ಬಂದಿದೆ. ಜೊತೆಗೆ ಮತ್ತೊಂದು ಕಳವು ಕೃತ್ಯಕ್ಕೆ ಹೊಂಚು ಹಾಕಿದ್ದ ವಿವರ ಬಾಯ್ಬಿಟ್ಟಿದ್ದಾನೆ.
ಕಳವು ಮಾಡಿದ್ದ ಚಿನ್ನಾಭರಣದಲ್ಲಿ ೧೦ ಗ್ರಾಂನ್ನು ಬೇರೆಡೆ ಹಾಗೂ ಉಳಿದ ೨೭ ಗ್ರಾಂ ಆಭರಣಗಳನ್ನು ಅತ್ತೆಯ ಹೆಸರಿನಲ್ಲಿದ್ದ ಬ್ಯಾಂಕ್ ಖಾತೆಯಲ್ಲಿ ಅಡಮಾನವಿಟ್ಟು ಹಣ ಪಡೆದುಕೊಂಡಿದ್ದು ತನಿಖೆಯಿಂದ ಬೆಳಕಿಗೆ ಬಂದಿತ್ತು.