
ನಾಳೆ ಜೈ ಭಾರತ್ ರ್‍ಯಾಲಿ
ಕೋಲಾರ,ಏ.೧೫-ಪ್ರಧಾನಿ ನರೇಂದ್ರ ಮೋದಿ ಉಪ ನಾಮ ಕುರಿತು ಹೇಳಿಕೆ ನೀಡಿ ೨ ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೋಲಾರದಿಂದಲೇ ಚುನಾವಣಾ ಪ್ರಚಾರಕ್ಕೆ ರಣಕಹಳೆ ಮೊಳಗಿಸಲು ಸಜ್ಜಾಗಿದ್ದಾರೆ. ಹಲವು ಬಾರಿ ಕಾಂಗ್ರೆಸ್ ಸಮಾವೇಶವನ್ನು ಮುಂದೂಡಿದ್ದ ರಾಹುಲ್ ಗಾಂಧಿಯವರು ನಾಳೆ ಕೋಲಾರಕ್ಕೆ ಆಗಮಿಸಿ ಶಕ್ತಿ ಪ್ರದರ್ಶನ ನಡೆಸಲಿದ್ದಾರೆ.
ಮೋದಿ ಉಪ ನಾಮ ಕುರಿತು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಜಾರ್ಖಂಡ್ ನ್ಯಾಯಾಲಯ ಶಿಕ್ಷೆ ವಿಧಿಸಿದ ಬಳಿಕ ರಾಹುಲ್ ಗಾಂಧಿಯವರು ಲೋಕಸಭಾ ಸದಸ್ಯತ್ವ ಸ್ಥಾನದಿಂದಲೂ ಅನರ್ಹಗೊಂಡಿದ್ದರು ಈಗ ಕಾನೂನು ಸಮರ ನಡೆಸುತ್ತಿದ್ದು, ಏ.೨೦ ರಂದು ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ.
ರಾಹುಲ್ ಗಾಂಧಿ ನಾಳೆ ಬೆಳಿಗ್ಗೆ ಬೆಂಗಳೂರಿಗೆ ಆಗಮಿಸಲಿದ್ದು, ಕೋಲಾರಕ್ಕೆ ತೆರಳಿ ಜೈ ಭಾರತ್ ರ್‍ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಈ ರ್‍ಯಾಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಪಾಲ್ಗೊಳ್ಳಲಿದ್ದಾರೆ.ನಾಳೆ ಸಂಜೆ ಇಂದಿರಾಗಾಂಧಿ ಭವನವನ್ನು ರಾಹುಲ್ ಗಾಂಧಿ ಲೋಕಾರ್ಪಣೆ ಮಾಡಲಿದ್ದು, ಈ ಸಭಾಂಗಣದಲ್ಲಿ ೭೫೦ ಮಂದಿ ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿದೆ. ಈ ರ್‍ಯಾಲಿ ಮೊದಲು ಏ.೫ ರಂದು ನಿಗದಿಯಾಗಿತ್ತು. ಆದಾದ ನಂತರ ಏ.೯ಕ್ಕೆ ಮುಂದೂಡಲಾಗಿತ್ತು. ಈಗ ಈ ರ್‍ಯಾಲಿ ನಾಳೆ ನಿಗದಿಯಾಗಿದೆ. ಚುನಾವಣೆಗೆ ಸಿದ್ಧತೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹಾಗೂ ಇನ್ನಿತರ ಕಾರಣಗಳಿಂದಾಗಿ ಜೈ ಭಾರತ್ ಸಮಾವೇಶವನ್ನು ಮುಂದೂಡಲಾಗಿತ್ತು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.ಮೋದಿ ಉಪ ನಾಮ ಹೇಳಿಕೆ ಕುರಿತಂತೆ ಮಾರ್ಚ್ ೨೩ ರಂದು ಗುಜರಾತ್‌ನ ಸೂರತ್ ನ್ಯಾಯಾಲಯ ರಾಹುಲ್ ಗಾಂಧಿಯವರಿಗೆ ೨ ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈಗ ಕೋಲಾರದಿಂದಲೇ ಮತ್ತೆ ಚುನಾವಣಾ ಪ್ರಚಾರಕ್ಕೆ ರಾಹುಲ್ ಗಾಂಧಿಯವರು ರಣಕಹಳೆ ಮೊಳಗಿಸಲು ಸಜ್ಜಾಗಿದ್ದು, ಕೈ ಪಾಳಯದಲ್ಲಿ ರಣೋತ್ಸಾಹ ಕಂಡು ಬಂದಿದೆ. ಈ ಮೂಲಕ ಮೇ.೧೦ ರಂದು ವಿಧಾನಸಭಾ ಚುನಾವಣೆಗೆ ರಾಹುಲ್ ಗಾಂಧಿ ಕೋಲಾರದಲ್ಲಿ ಶಕ್ತಿ ಪ್ರದರ್ಶನ ನಡೆಸುವ ಮೂಲಕ ಭರಾಟೆ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ.ಇದೇ ವೇಳೆ ಈಗಾಗಲೇ ವರುಣಾದಿಂದ ಅಖಾಡಕ್ಕೆ ಇಳಿದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರದಿಂದಲೂ ಸ್ಪರ್ಧಿಸಲು ಬಯಕೆ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಯಾವುದೇ ನಿರ್ಧಾರ ಕೈಗೊಂಡಿಲ್ಲ. ನಾಳೆ ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆ, ಸಿದ್ದರಾಮಯ್ಯಗೆ ಕೋಲಾರದಿಂದ ಟಿಕೆಟ್ ನೀಡುವ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ.