ಚಿನ್ನದ ಕಂತಿ ಪ್ರಶಸ್ತಿಗೆ ಶಾಮನೂರು ಶಿವಶಂಕರಪ್ಪ ಆಯ್ಕೆ

ಕಲಬುರಗಿ.ಮಾ.24:ಪ್ರತಿ ವರ್ಷ ಶ್ರೀನಿವಾಸ್ ಸರಡಗಿಯ ಶ್ರೀ ಗುರು ಚಿಕ್ಕವೀರೇಶ್ವರ್ ಸಂಸ್ಥಾನ ಹಿರೇಮಠದ ವತಿಯಿಂದ ನೀಡಲಾಗುವ ಚಿನ್ನದ ಕಂತಿ ಪ್ರಶಸ್ತಿಯನ್ನು ಈ ಬಾರಿ ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಮಠದ ಪೀಠಾಧಿಪತಿ ರೇವಣಸಿದ್ಧ ಶಿವಾಚಾರ್ಯರು ಹೇಳಿದರು.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಆರು ವರ್ಷಗಳಿಂದ ವೈಜ್ಞಾನಿಕ, ಸಾಹಿತ್ಯ, ಧಾರ್ಮಿಕ, ಸಂಶೋಧನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಚಿನ್ನದ ಕಂತಿ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಈ ಬಾರಿ ಶಾಮನೂರು ಅವರಿಗೆ ಪ್ರದಾನ ಮಾಡಲಾಗುವುದು ಎಂದರು.
ಚಿನ್ನದ ಕಂತಿ ಪ್ರಶಸ್ತಿ ಪ್ರದಾನ ಸಮಾರಂಭವು ಬರುವ ಏಪ್ರಿಲ್ 4ರಂದು ನಗರದ ಸಾರ್ವಜನಿಕ ಉದ್ಯಾನವನದಲ್ಲಿರುವ ವೀರಶೈವ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ನೆರವೇರಲಿದೆ. ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಕಾರ್ಯಾಧ್ಯಕ್ಷರೂ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಈಶ್ವರ್ ಖಂಡ್ರೆಯವರೂ ಸೇರಿದಂತೆ ವಿವಿಧ ಮಠಾಧೀಶರು, ರಾಜಕೀಯ ಮುಖಂಡರು ಆಗಮಿಸುವರು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಕುರಿತು ಚಿಂತನ, ಮಂಥನ ಸಹ ನೆರವೇರಲಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ನಾಗಲಿಂಗಯ್ಯ ಮಠಪತಿ, ಶಿವಾನಂದ್ ಉಪ್ಪಿನ್, ಭೀಮಾಶಂಕರ್ ಚಕ್ಕಿ, ವಿರುಪಾಕ್ಷ, ಹಣಮಂತರಾಯ್, ರವಿಕುಮಾರ್ ಶಾಪೂರಕರ್ ಮುಂತಾದವರು ಉಪಸ್ಥಿತರಿದ್ದರು.