ಚಿನಕುರಳಿ ಕ್ರಿಕೆಟ್‌ಗೆ ಕ್ಷಣಗಣನೆ: ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಟ

ಚೆನ್ನೈ,ಏ.೮- ಪ್ರಶಸ್ತಿಗಾಗಿ ಕಾದಾಟ. ಪ್ರತಿಯೊಂದು ಪಂದ್ಯದಲ್ಲೂ ಗೆಲುವಿಗಾಗಿ ಎಂಟೂ ತಂಡಗಳ ಸೆಣಸಾಟ. ಫೋರು, ಸಿಕ್ಸರ್‌ಗಳ ಸುರಿಮಳೆ. ಕ್ಯಾಚ್‌ಗಳನ್ನು ಹಿಡಿದರೆ ಸಂಭ್ರಮ, ಕೈಚೆಲ್ಲಿದರೆ ನಿರಾಸೆ. ಇವೆಲ್ಲವೂ ಮೇಳೈಸಲಿದೆ. ನಾಳೆಯಿಂದ ಆರಂಭವಾಗುವ ಚಿನಕುರಳಿ ಕ್ರಿಕೆಟ್ ಎಂದೇ ಖ್ಯಾತಿಯಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ.
ಈಗಾಗಲೇ ಪ್ರಶಸ್ತಿ ಯಾವ ತಂಡದ ಪಾಲಾಗಲಿದೆ ಎನ್ನುವ ಲೆಕ್ಕಾಚಾರಗಳು ಆರಂಭವಾಗಿವೆ. ಇದರ ಜತೆಗೆ ಬೆಟ್ಟಿಂಗ್ ಭರಾಟೆಯೂ ಬಲು ಜೋರಾಗಿಯೇ ನಡೆಯಲಿದೆ. ಟೂರ್ನಿ ಆರಂಭವಾಗಿ ಮುಗಿಯವ ತನಕ ಪ್ರತಿಯೊಂದು ತಂಡದ ಮೇಲೆ ಬುಕ್ಕಿಗಳ ನಡುವೆ ಹಣದ ಹೊಳೆಯೇ ಹರಿಯಲಿದೆ.
ಕಳೆದ ಬಾರಿಯ ಐಪಿಎಲ್ ಟೂರ್ನಿಯ ವೇಳೆ ದೇಶದಲ್ಲಿ ಮಹಾಮಾರಿ ಕೊರೊನಾ ಸೋಂಕು ಬಹುವಾಗಿ ಕಾಡಿತ್ತು. ಹಾಗೆ ನೋಡಿದರೆ ಟೂರ್ನಿ ನಡೆಯುವುದೇ ಅನುಮಾನವಾಗಿತ್ತು. ಸಾಕಷ್ಟು ಅಳೆದು ತೂಗಿ ಬಿಸಿಸಿಐ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಸಿದ್ದು ಗೊತ್ತಿರುವ ವಿಚಾರ.
ಇದಾದ ಬಳಿಕ ಕೆಲ ತಿಂಗಳಲ್ಲೇ ಮತ್ತೊಮ್ಮೆ ಐಪಿಎಲ್ ಟೂರ್ನಿಗೆ ವೇದಿಕೆ ಅಣಿಯಾಗಿದೆ.
ಆದರೆ ಈ ಬಾರಿಯೂ ಕೊರೊನಾ ಸೋಂಕು ಶರವೇಗದಲ್ಲಿ ಹರಡುತ್ತಿದೆ. ಇದರ ಭೀತಿಯ ನಡುವೆಯೂ ದೇಶದಲ್ಲೇ ೧೪ನೇ ಆವೃತ್ತಿ ನಡೆಯುತ್ತಿದೆ. ಕೆಲವು ಆಟಗಾರರಿಗೂ ಈ ಸಾಂಕ್ರಾಮಿಕ ಸೋಂಕು ತಗುಲಿದೆ. ಆದರೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪಂದ್ಯಗಳು ನಡೆಯಲಿವೆ.
ಈ ಬಾರಿಯಾದರೂ ಪ್ರೇಕ್ಷಕರಿಗೆ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಅವಕಾಶ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಸಾಂಕ್ರಾಮಿಕ ಪಿಡುಗು ಅದಕ್ಕೆ ತಣ್ಣೀರು ಎರಚಿದೆ. ರೋಚಕ ಪಂದ್ಯಗಳು, ತಮ್ಮ ನೆಚ್ಚಿನ ಆಟಗಾರರ ಆಟವನ್ನು ಟಿವಿ ಮುಂದೆ ಕುಳಿತು ವೀಕ್ಷಿಸುವುದು ಬಿಟ್ಟರೆ ಅನ್ಯ ಮಾರ್ಗವಿಲ್ಲ.
ಐಪಿಎಲ್ ಉದ್ಘಾಟನಾ ಪಂದ್ಯಕ್ಕೂ ಮುನ್ನ, ವರ್ಣರಂಜಿತ ಕಾರ್ಯಕ್ರಮಗಳೊಂದಿಗೆ ಚಾಲನೆ ಸಿಗುತ್ತಿತ್ತು. ಪಾಪ್ ಗಾಯನ, ಬಾಲಿವುಡ್ ನಟಿಯರ ನೃತ್ಯಗಳು ಪ್ರೇಕ್ಷಕರನ್ನು ರಂಜಿಸುತ್ತಿದ್ದವು.ಕಳೆದ ಬಾರಿ ಮತ್ತು ನಾಳೆಯಿಂದ ಆರಂಭವಾಗಲಿರುವ ಉದ್ಘಾಟನಾ ಕಾರ್ಯಕ್ರಮಕ್ಕೆ ಕೊರೊನಾ ಬ್ರೇಕ್ ಹಾಕಿದೆ.
೧೪ನೇ ಆವೃತ್ತಿಯಲ್ಲಿ ಪಾಲ್ಗೊಳ್ಳುವ ಎಂಟೂ ತಂಡಗಳು ಕಠಿಣ ತಾಲೀಮು ನಡೆಸಿ ತಮ್ಮದೇ ತಂತ್ರಗಳನ್ನು ರೂಪಿಸಿ ಸಜ್ಜಾಗಿದೆ. ಈ ಟಿ-೨೦ ಪಂದ್ಯಗಳಲ್ಲಿ ರನ್ ಬಾರಿಸಬೇಕು ಇಲ್ಲವೇ ನಿರ್ಗಮಿಸಬೇಕು ಇದು ಬಿಟ್ಟರೆ ಅಟಗಾರರಿಗೆ ಬೇರೆ ದಾರಿ ಇಲ್ಲ.
ಐಪಿಎಲ್ ಆರಂಭವಾದಾಗಿನಿಂದ ಸಾಕಷ್ಟು ಉದಯೋನ್ಮುಖ ಆಟಗಾರರನ್ನು ಹುಟ್ಟುಹಾಕಿದೆ. ಮುಂಬರುವ ಟಿ-೨೦ ವಿಶ್ವಕಪ್ ದೃಷ್ಟಿಯಿಂದ ಉತ್ತಮ ಆಟ ಪ್ರದರ್ಶಿಸುವ ಆಟಗಾರರ ಆಯ್ಕೆಯೂ ನಡೆಯಲಿದ್ದು,ಎಂಟು ತಂಡಗಳಲ್ಲಿರುವ ಭಾರತೀಯ ಆಟಗಾರರಿಗೆ ಅಗ್ನಿಪರೀಕ್ಷೆ ಎದುರಾಗಿದೆ.
ತಂಡಗಳ ಬಗ್ಗೆ ಹೇಳುವುದಾದರೆ ಮುಂಬೈ ಇಂಡಿಯನ್ಸ್ ಅಚ್ಚುಮೆಚ್ಚಿನ ತಂಡ. ಈ ತಂಡದ ಸಾರಥ್ಯ ವಹಿಸಿರುವ ರೋಹಿತ್ ಶರ್ಮಾ ಟಿ-೨೦ ಪಂದ್ಯಕ್ಕೆ ಉತ್ತಮ ನಾಯಕ. ಅದಕ್ಕೆ ಅಲ್ವೆ ಐದು ಬಾರಿ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿದ ಕೀರ್ತಿಗೆ ಅವರು ಭಾಜನರಾಗಿದ್ದಾರೆ. ಹಾಲಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂಬುದರಲ್ಲಿ ಎರಡು ಮಾತಿಲ್ಲ.
ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವೂ ಒಂದಾಗಿತ್ತು. ಆದರೆ ಎಂ.ಎಸ್.ಧೋನಿ ಪಡೆ ಲೀಗ್ ಹಂತದಲ್ಲೇ ನಿರ್ಗಮಿಸಿತ್ತು. ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಹಾಗೂ ಬಿರುಸಿನ ಆಟಗಾರ ಸುರೇಶ್ ರೈನಾ ವೈಯಕ್ತಿಕ ಕಾರಣಗಳಿಂದಾಗಿ ಕಳೆದ ಬಾರಿ ನಡೆದ ಐಪಿಎಲ್ ನಿಂದ ದೂರ ಉಳಿದಿದ್ದರು. ಇದು ತಂಡ ಹಿನ್ನಡೆಗೆ ಕಾರಣವಾಗಿತ್ತು. ಮೂರು ಬಾರಿ ಪ್ರಶಸ್ತಿ ಬಾಚಿಕೊಂಡಿರುವ ಸಿಎಸ್ ಕೆ ಈ ಬಾರಿ ಕಪ್ ಮೇಲೆ ಕಣ್ಣಿಟ್ಟಿದೆ.
ಕೊಲ್ಕತ್ತಾ ನೈಟ್ ರೈಡರ್ಸ್ ಎರಡು ಬಾರಿ ಪ್ರಶಸ್ತಿ ಮುಡಿಗೇರಿಸಿದ್ದು ಈ ಬಾರಿಯೂ ಕಠಿಣ ತಾಲೀಮು ಮತ್ತು ತಂತ್ರಗಾರಿಕೆಯೊಂದಿಗೆ ಎದುರಾಳಿ ತಂಡಗಳಿಗೆ ತಿರುಗೇಟು ನೀಡುವ ಉತ್ಸಾಹದಲ್ಲಿದೆ.
ಇನ್ನೂ ಸನ್ ರೈಸರ್ಸ್ ಹೈದರಾಬಾದ್,ಡೆಕ್ಕನ್ ಚಾರ್ಜರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಲಾ ಒಂದು ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ.ಈ ಮೂರು ಡಗಳು ಉತ್ತಮ ಪ್ರದರ್ಶನ ನೀಡಲು ತುದಿಗಾಲಲ್ಲಿ ನಿಂತಿವೆ.
ಕಿಂಗ್ಸ್ ಪಂಜಾಬ್ ತಂಡವು ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಲು ಹೆಣಗಾಡುತ್ತಿದೆ.ಕಳೆದ ಬಾರಿ ನಾಯಕ ಕರ್ನಾಟಕದ ಕೆ.ಎಲ್. ರಾಹುಲ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ರನ್ ಹೊಳೆ ಹರಿಸಿದ್ದರು. ೧೪ನೇ ಆವೃತ್ತಿಯಲ್ಲಿ ಈ ತಂಡದ ಚಿತ್ತ ಕೇಂದ್ರೀಕೃತವಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ನಲ್ಲಿ ಪ್ರಶಸ್ತಿ ಗೆಲ್ಲಲು ಇನ್ನೂ ಸಾಧ್ಯವಾಗಿಲ್ಲ . ಒಮ್ಮೆ ಮಾತ್ರ ರನ್ನರ್ ಅಪ್ ಆಗಿದೆ. ಈ ಬಾರಿ ಕೊಹ್ಲಿ ಪಡೆ ಜಯಭೇರಿ ಬಾರಿಸುವ ವಿಶ್ವಾಸದಲ್ಲಿದೆ.
ಪ್ರಶಸ್ತಿ ಗೆಲ್ಲುವ ತಂಡಕ್ಕೆ ಬರೋಬ್ಬರಿ ಹತ್ತು ಕೋಟಿ ರೂ ಹಾಗೂ ರನ್ನರ್ಸ್ ಅಪ್ ತಂಡಕ್ಕೆ ೬.೨೫ ಕೋಟಿ ರೂ.ದೊರೆಯಲಿದೆ.
ಸೋಲು-ಗೆಲುವಿನ ಲೆಕ್ಕಚಾರಗಳು ಏನೇ ಇರಲಿ. ಒಂದೂವರೆ ತಿಂಗಳವರೆಗೂ ಪ್ರೇಕ್ಷಕರಿಗೆ ಟಿ.ವಿ ಮುಂದೆ ಕುಳಿತು ತಮ್ಮ ನೆಚ್ಚಿನ ಆಟಗಾರರ ಆಟವನ್ನು ವೀಕ್ಷಿಸಿ ಖುಷಿ ಪಡಲು ಯಾವುದೇ ಅಡ್ಡಿ ಆತಂಕವತೂ ಖಂಡಿತ ಇಲ್ಲ.