
ಬೆಂಗಳೂರು,ಜ.೮- ಚಿತ್ರಕಲೆ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸುವ ಒಂದು ಮಾಧ್ಯಮ, ಮನದಾಳದ ಮಾತುಗಳು ಮತ್ತು ಭಾವನೆಗಳನ್ನು ಚಿತ್ರಕಲೆಯ ಮೂಲಕ ವ್ಯಕ್ತಪಡಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿಂದು ಚಿತ್ರಕಲಾ ಪರಿಷತ್ನ ೨೦ನೇ ಚಿತ್ರಸಂತೆಗೆ ಚಾಲನೆ ನೀಡಿ ಮಾತನಾಡಿದ ಅವರು, ಚಿತ್ರಕಲೆ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನವನ್ನು ಸಾರ್ವಜನಿಕರು ಮಾಡಬೇಕು. ಚಿತ್ರಕಲಾ ಪರಿಷತ್ ಸಹ ಸಾಮಾನ್ಯ ಜನರಿಗೂ ಚಿತ್ರಕಲೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ ಎಂದರು.
ಕರ್ನಾಟಕ ಚಿತ್ರಕಲಾ ಪರಿಷತ್ ಒಳ್ಳೆಯ ಕೆಲಸ ಮಾಡುತ್ತಿದೆ. ಇದು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಂಸ್ಥೆಯಾಗಿದೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ ಕರ್ನಾಟಕ ಭಾಗಗಳಲ್ಲೂ ಸಿತ್ರಸಂತೆ ಆಯೋಜಿಸುವಂತೆ ಮುಖ್ಯಮಂತ್ರಿಗಳು ಸಲಹೆ ಮಾಡಿದರು.
ಈ ಚಿತ್ರಸಂತೆಗೆ ಸರ್ಕಾರ ಎಲ್ಲ ನೆರವು ನೀಡಲಿದೆ. ಚಿತ್ರಸಂತೆಯನ್ನು ರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು. ಬ್ರಾಂಡ್ ಬೆಂಗಳೂರಿನ ಜತೆಗೆ ಚಿತ್ರಕಲಾ ಪರಿಷತ್ನ ಚಿತ್ರಸಂತೆಯೂ ರಾಷ್ಟ್ರೀಯ ಮಟ್ಟಕ್ಕೆ ತಲುಪುವ ನಿಟ್ಟಿನಲ್ಲಿ ಗಮನ ಹರಿಸಬೇಕಿದೆ ಎಂದರು.
ಮುಂದಿನ ವರ್ಷದಿಂದ ಒಂದು ದಿನದ ಬದಲು ೨ ದಿನ ಚಿತ್ರಸಂತೆ ಮಾಡುವಂತೆಯೂ ಮುಖ್ಯಮಂತ್ರಿಗಳು ಹೇಳಿದರು. ಸುತ್ತಾಟ ಚಿತ್ರ ಖರೀದಿ
ಚಿತ್ರಸಂತೆಯನ್ನು ಕ್ಯಾನ್ವಾಸ್ ಮೇಲೆ ನವಿಲಿನ ಚಿತ್ರ ಬಿಡಿಸಿ ಸಹಿ ಹಾಕುವ ಮೂಲಕ ಉದ್ಘಾಟಿಸಿದ ಮುಖ್ಯಮಂತ್ರಿಗಳು, ಚಿತ್ರಸಂತೆಯಲ್ಲಿ ಓಡಾಡಿ ಕೆಲ ಚಿತ್ರಗಳನ್ನು ಖರೀದಿ ಮಾಡಿದರು.
ಈ ಸಂದರ್ಭದಲ್ಲಿ ಸಚಿವ. ಡಾ. ಸಿ.ಎನ್ ಅಶ್ವತ್ಥನಾರಾಯಣ, ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್ ಶಂಕರ್, ಶಾಸಕ ರಿಜ್ವಾನ್ ಅರ್ಷದ್ ಉಪಸ್ಥಿತರಿದ್ದರು.