ಚಿತ್ರೀಕರಣದ ವೇಳೆ ನಟ ಶಾರೂಖ್ ಖಾನ್‌ಗೆ ಪೆಟ್ಟು

ಮುಂಬೈ,ಜು.೪:ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ವೇಳೆ ಬಾಲಿವುಡ್ ನಟ ಶಾರೂಖ್ ಖಾನ್ ಅವರಿಗೆ ಪೆಟ್ಟಾಗಿದೆ. ಅವರು ನಟಿಸುತ್ತಿರುವ ಬಹುನಿರೀಕ್ಷಿತ ಜವಾನ್ ಚಿತ್ರದ ನಿರೀಕ್ಷೆಯಲ್ಲಿರುವಾಗಲೇ ಈ ಘಟನೆ ನಡೆದಿದೆ. ಇತ್ತೀಚೆಗಷ್ಟೆ ಅಟ್ಲಿ ನಿರ್ದೇಶನದ ಜವಾನ್ ಚಿತ್ರದ ಟ್ರೈಯ್ಲರ್ ಬಿಡುಗಡೆಯ ಬಗ್ಗೆ ಸುದ್ದಿ ಹೊರ ಬಿದ್ದಿತ್ತು.
ಟಾಮ್‌ಕ್ರೂಜ್ ಅವರ ಹಾಲಿವುಡ್‌ನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದೆನಿಸಿರುವ ಮಿಷನ್ ಇಂಪಾಸಿಬಲ್-೭ ಸಿನಿಮಾದ ಮಧ್ಯಂತರದಲ್ಲಿ ಜವಾನ್ ಸಿನಿಮಾದ ಮೊದಲ ಟ್ರೈಯ್ಲರ್ ಚಿತ್ರಮಂದಿರದಲ್ಲೇ ಬಿಡುಗಡೆಯಾಗಲಿದೆ ಎಂಬ ಸುದ್ದಿಯೂ ಹಬ್ಬಿತ್ತು.
ಇದರ ನಡುವೆ ನಟ ಶಾರೂಖ್ ಅವರಿಗೆ ಶೂಟಿಂಗ್ ಸೆಟ್‌ನಲ್ಲಿ ಪೆಟ್ಟು ತಗುಲಿರುವುದು ಅವರ ಅಭಿಮಾನಿಗಳಿಗೆ ಬೇಸರ ತಂದಿದೆ. ಮೂಲಗಳ ಪ್ರಕಾರ ಲಾಸ್‌ಏಂಜಲೀಸ್‌ನಲ್ಲಿ ಬಹಿರಂಗವಾಗದಿರುವ ಪ್ರಾಜೆಕ್ಟ್‌ವೊಂದರ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದ ವೇಳೆ ಅವರ ಮೂಗಿಗೆ ಪೆಟ್ಟು ಬಿದ್ದು ರಕ್ತ ಸ್ರಾವವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ರಕ್ತ ನಿಲ್ಲಲು ಶಸ್ತ್ರ ಚಿಕಿತ್ಸೆ ಮಾಡಿ ಯಾವುದೇ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಶಾರೂಕ್ ಖಾನ್ ಅವರು ಆಸ್ಪತ್ರೆಯಿಂದ ಹಿಂದಿರುಗಿದ್ದು, ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಪಟಾಣ್ ಚಿತ್ರದ ಯಶಸ್ಸಿನಲ್ಲಿರುವ ಅವರು, ಜವಾನ್ ಬಳಿಕ ರಾಜ್‌ಕುಮಾರ್ ಹಿರಾನಿ ಅವರ ಡಂಕಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.