ಕಲಬುರಗಿ: ಎ.25:ಚಿತ್ರರಚನೆಗೆ ಶರಣರ ಪರಂಪರೆ ಪ್ರೇರಣೆ ನೀಡುವಲ್ಲಿ ನೆರವಾಗಿವೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ಅಭಿಪ್ರಾಯಪಟ್ಟರು.
ನಗರದ ಮಾನಕರ್ ಲೇಔಟ್‍ನಲ್ಲಿರುವ ಬಿಸಿಲು ಆರ್ಟ ಗ್ಯಾಲರಿಯಲ್ಲಿ ವ್ಹಿ.ಬಿ.ಬಿರಾದಾರ ಸಾಂಸ್ಕøತಿಕ ಪ್ರತಿಷ್ಠಾನ ಬಸವ ಜಯಂತಿ ನಿಮಿತ್ಯ ಏರ್ಪಡಿಸಿದ್ದ ಶರಣರ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಕಲ್ಯಾಣ ಕರ್ನಾಟಕದಲ್ಲಿ ಶರಣರ ಐತಿಹ್ಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಚಿತ್ರಕಲಾವಿದರು ಸಹಕಾರಿಯಾಗಿದ್ದಾರೆ. ಸಾಹಿತ್ಯ ಬರಹ ರೂಪದಲ್ಲಿ ಮೇಳೈಸಿಕೊಂಡರೆ, ಚಿತ್ರಕಲೆ ದೃಶ್ಯ ರೂಪದಲ್ಲಿ ರೋಮಾಂಚನವನ್ನುಂಟು ಮಾಡುತ್ತದೆ. ಕಲಬುರಗಿ ಪ್ರದೇಶ ಚಿತ್ರಕಲೆ ಜಗತ್ತಿಗೆ ಹೆಸರು ಮಾಡಿದೆ. ದೂರದ ಬೆಂಗಳೂರ ಕಲಾವಿದರ ಜೊತೆ ಪೈಪೋಟಿ ನೀಡಲು ಸನ್ನಧರಾಗಿದ್ದಾರೆ. ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಕಲಬುರಗಿ ಚಿತ್ರಕಲಾವಿದರು ಖ್ಯಾತನಾಮರಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಸಾಹಿತ್ಯದಷ್ಟೆ ಸಂಗೀತ ಮತ್ತು ಚಿತ್ರಕಲಾ ಕ್ಷೇತ್ರಕ್ಕೂ ಹೆಚ್ಚು ಮನ್ನಣೆ ನೀಡುವ ನಿಟ್ಟಿನಲ್ಲಿ ಪ್ರಯತ್ನವಾಗಬೇಕು. ಆ ದಿಸೆಯಲ್ಲಿ ಪ್ರಚಾರವೂ ಅಗತ್ಯವಾಗಿದೆ ಎಂದರು.
ಪತ್ರಕರ್ತ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ರೀತಿಯಲ್ಲಿ ತಮ್ಮಲ್ಲಿರುವ ಕಲಾ ಪ್ರತಿಭೆಯನ್ನು ನಾಲ್ಕು ಗೋಡೆಗಳ ಮಧ್ಯೆ ತೂಗು ಹಾಕದೆ ಅವುಗಳನ್ನು ಹೊರ ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಶ್ರಮ ಅಗತ್ಯ ಎಂದರು.
ಉಪನ್ಯಾಸಕ ವಿಶ್ವನಾಥ ಡೋಣ್ಣೂರ ಮಾತನಾಡಿ, ಸಾಹಿತ್ಯ, ಸಂಗೀತ ಮತ್ತು ಕಲಾ ಜಗತ್ತಿನಷ್ಟೆ ಧಾರ್ಮಿಕ ಪ್ರಪಂಚವೂ ಸನ್ಮಾರ್ಗದಲ್ಲಿ ನಡೆಯುತ್ತಿದೆ. ಶರಣರು, ಅವರ ತತ್ವಗಳು ಇಂದಿಗೂ ದಾರಿದೀಪವಾಗಿವೆ. ಕನ್ನಡತ್ವ, ಕನ್ನಡ ಮನವನ್ನು ಹೆಚ್ಚಿಸಲು ಗೀತೆಯನ್ನು ಪ್ರಸ್ತುತಪಡಿಸಿ ಗಮನ ಸೆಳೆದರು. ಹಿರಿಯ ಕಲಾವಿದ ವ್ಹಿ.ಬಿ.ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಲಾವಿದ ಮಲ್ಲಿಕಾರ್ಜುನ ಕೋರಳ್ಳಿ ನಿರೂಪಿಸಿದರು. ಶೈಲಜಾ ಬಿರಾದಾರ ವಂದಿಸಿದರು. ಹಿರಿಯ ಕಿರಿಯ ಚಿತ್ರಕಲಾವಿದರು ಉಪಸ್ಥಿತರಿದ್ದರು.