ಚಿತ್ರರಂಗದ ಸಮಸ್ಯೆಗಳ ಬಗ್ಗೆ ಪ್ರಮುಖ ನಿರ್ಮಾಪಕರೊಂದಿಗೆ ಶಿವಣ್ಣ ಸಮಾಲೋಚನೆ

ಬೆಂಗಳೂರು, ಆ.1- ಕರೋನಾ ಸಂಕಷ್ಟದಿಂದ ಚಿತ್ರರಂಗ ಸಮಸ್ಯೆಗೆ ಸಿಲುಕಿರುವ ಹಿನ್ನೆಲೆಯಲ್ಲಿ ಚಿತ್ರರಂಗದ ಚೇತರಿಕೆಗೆ ಕೈಗೊಳ್ಳಬೇಕಾದ ಕ್ರಮಗಳು, ಸರ್ಕಾರದಿಂದ ಪಡೆಯಬೇಕಾದ ಸೌಲಭ್ಯಗಳ ಬಗ್ಗೆ ಇಂದು ಕನ್ನಡದ ಪ್ರಮುಖ ನಿರ್ಮಾಪಕರೊಂದಿಗೆ ಹಿರಿಯ ನಟ ಶಿವರಾಜ್ ಕುಮಾರ್ ಮಹತ್ವದ ಸಮಾಲೋಚನೆ ನಡೆಸಿದರು.

ಶಿವರಾಜ್ ಕುಮಾರ್ ಅವರಿಗೆ ಚಿತ್ರರಂಗದಲ್ಲಿ ನಾಯಕತ್ವ ವಹಿಸಿಕೊಳ್ಳುವಂತೆ ಚಿತ್ರರಂಗ ಒಕ್ಕೊರಲಿನಿಂದ ಮನವಿ ಮಾಡಿ ಒಪ್ಪಿಸಿದ ನಂತರ ಚಿತ್ರರಂಗವನ್ನು ಒಟ್ಟಿಗೆ ಕರೆದೊಯ್ಯುವ ಕೆಲಸ ಮಾಡುತ್ತಿರುವುದು ಚಿತ್ರರಂಗದ ಮಟ್ಟಿಗೆ ಆಶಾದಾಯಕ ಬೆಳವಣಿಗೆಯಾಗಿದೆ‌.

ಇತ್ತೀಚೆಗಷ್ಟೇ ನಾಯಕರು ಹಾಗು ಪ್ರಮುಖರೊಂದಿಗೆ ಚರ್ಚೆ ನಡೆಸಿದ ನಂತರ ಇಂದು ನಾಗವಾರದ ನಿವಾಸದಲ್ಲಿ ಪ್ರಮುಖ ‌ನಿರ್ಮಾಪಕರ‌ರೊಂದಿಗೆ ಶಿವರಾಜ್ ಕುಮಾರ್ ಚಿತ್ರರಂಗದ ಹಲವು ‌ವಿಷಯಗಳೊಂದಿಗೆ ಚರ್ಚೆ ನಡೆಸಿದರು.

ಸಭೆಯಲ್ಲಿ ಹಿರಿಯ ನಿರ್ಮಾಪಕ‌ ಹಾಗು ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದ್, ನಿರ್ಮಾಪಕರಾದ ಆರ್. ಚಂದ್ರು, ಎ. ಗಣೇಶ್, ಕೆ. ಮಂಜು, ಜಯಣ್ಣ,ಎನ್. ಎಂ ಸುರೇಶ್, ಸೂರಪ್ಪ ಬಾಬು,ಸೇರಿದಂತೆ ಹಲವು ಪಾಲ್ಗೊಂಡಿದ್ದರು.

ಕರೋನಾ ಸಮಯದಲ್ಲಿ ಚಿತ್ರರಂಗ ಸಮಸ್ಯೆಗೆ ಸಿಲುಕಿದೆ.‌ಇದರಿಂದ ಹೊರ ಬರುವ ಜೊತೆಗೆ ಸಂಕಷ್ಟದಲ್ಲಿ ಸಿಲಿಕಿರುವ ಚಿತ್ರರಂಗದ ಮಂದಿಗೆ ರಾಜ್ಯ ಸರ್ಕಾರದಿಂದ ಅಗತ್ಯ ಸಹಕಾರ ಮತ್ತು ನೆರವು ಪಡೆಯಲು ಇಂದು ನಡೆದ ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಕರೋನಾ ಸೋಂಕು ಕಾಣಿಸಿಕೊಂಡ‌ ನಂತರ ಚಿತ್ರೀಕರಣ ಸ್ಥಗಿತಗೊಳಿಸಲಾಗಿದ್ದು, ಚಿತ್ರೀಕರಣ ಆರಂಭಿವುದಾದರೆ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು, ಕರೋನಾ ನಂತರ ಚಿತ್ರ ರಂಗದ ಪರಿಸ್ಥಿತಿ ಸೇರಿದಂತೆ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಕುರಿತು ಸುದೀರ್ಘ ಚರ್ಚೆ ನಡೆಸಲಾಗಿದ್ದು ,ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಆ ಬಳಿಕ ಸಮಗ್ರ ಮನವಿಯನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಸಲ್ಲಿಸಿ ಚಿತ್ರರಂಗ ಹಿತ ಕಾಪಾಡುವಂತೆ ಮನವಿ ಮಾಡಲು ನಿರ್ಧರಿಸಲಾಗಿದೆ.

ಒಟಿಟಿ ಬಗ್ಗೆ ಚರ್ಚೆ:
ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಚಿತ್ರಮಂದಿರಗಳು ತೆರೆಯದಿರುವ ಹಿ್ನನ್ನೆಲೆಯಲ್ಲಿ ಒಟಿಟಿ ಬಂದಿರುವುದು ನಿರ್ಮಾಪಕರಿಗೆ ಅನುಕೂಲವಾಗಲಿದ್ದು ಈ ಬಗ್ಗೆಯೂ ಮುಂದಿನ ನಡೆಯ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು

ಡಾ .ರಾಜ್ ಹಾದಿಯಲ್ಲಿ ಶಿವಣ್ಣ

ಹಿರಿಯ ನಟ ಡಾ.ಶಿವರಾಜ್ ಕುಮಾರ್ ಅವರಿಗೆ ಚಿತ್ರರಂಗ ಒಕ್ಕೊರಲಿನಿಂದ ‌ನಾಯಕತ್ವ ವಹಿಸಿಕೊಳ್ಳುವಂತೆ ಮನವಿ‌ ಮಾಡಿದ ಬಳಿಕ ಶಿವಣ್ಣ ಅವರು ಚಿತ್ರರಂಗದ ಎಲ್ಲಾ ಮಂದಿಯನ್ನು ಒಟ್ಟಿಗೆ ಕರೆದೊಯ್ಯುತ್ತಿರುವುದು ಆಶಾದಾಯಕ ಬೆಳಣಿಗೆ. ಡಾ.ರಾಜ್ ಕುಮಾರ್ ಹಾದಿಯಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಕೊಂಡು ಹೋಗುತ್ತಿರುವುದು ಚಿತ್ರರಂಗದ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಎಂದು ನಿರ್ಮಾಪಕ,ನಿರ್ದೇಶಕ ಆರ್ ಚಂದ್ರು ಹೇಳಿದ್ದಾರೆ.

ಮೊನ್ನೆಯಷ್ಟೆ ನಾಯಕ ನಟರು ಸೇರಿದಂತೆ ಪ್ರಮುಖರೊಂದಿಗೆ ಚಿತ್ರರಂಗದ ಸಮಸ್ಯೆ ,ಸವಾಲುಗಳು ಬಗ್ಗೆ ಚರ್ಚೆ ನಡೆಸಿದ್ದರು. ಇದೀಗ ನಿರ್ಮಾಪಕರೊಂದಿಗೆ ಚರ್ಚೆ ನಡೆಸಿ ಚಿತ್ರೀರಕಣ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಒಟ್ಟಾರೆ ಚಿತ್ರರಂಗಕ್ಕೆ ಸರ್ಕಾರದಿಂದ ಆಗಬೇಕಾದ ಕೆಲಸಗಳು, ನೆರವು ಬಗ್ಗೆ ಮುಖ್ಯಮಂತ್ರಿಗಳನ್ನು ಶಿವಣ್ಣ ನೇತೃತ್ವದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆಯಾವಾಗ ಎನ್ನುವುದನ್ನು ಶಿವಣ್ಣ ನಿರ್ಧರಿಸುತ್ತಾರೆ ಎಂದರು.

ಇಡೀ ಚಿತ್ರರಂಗ ಶಿವಣ್ಣ ಅವರ ನಾಯಕತ್ವವನ್ನು ಒಕ್ಕೊರಲಿನಿಂದ ಒಪ್ಪಿಕೊಂಡಿದ್ದು ಅವರ ಮಾರ್ಗದರ್ಶನ ಮತ್ತು ಸಹಕಾರದಲ್ಲಿ ಮುನ್ನೆಡೆಯುವುದಾಗಿ ಅವರು ತಿಳಿಸಿದರು.