ಚಿತ್ರಮಂದಿರ ಭರ್ತಿಗೆ ಅವಕಾಶ ಸಿಎಂ ಜತೆ ಚರ್ಚೆ

ಬೆಂಗಳೂರು,ಏ.೬- ಚಲನಚಿತ್ರ ಮಂದಿರಗಳಲ್ಲಿ ಶೇ. ೧೦೦ರಷ್ಟು ಪ್ರೇಕ್ಷಕರ ಭರ್ತಿಗೆ ಏ.೭ರ ನಂತರವು ಅವಕಾಶ ನೀಡಬೇಕೆಂಬ ಚಿತ್ರನಿರ್ಮಾಪಕರ ಬೇಡಿಕೆ ಕುರಿತು ಮುಖ್ಯಮಂತ್ರಿಗಳ ಜತೆ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ಕೊರೊನಾ ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ನಾಳೆಯವರೆಗೆ ಮಾತ್ರ ಶೇ. ೧೦೦ ರಷ್ಟು ಪ್ರೇಕ್ಷಕರ ಭರ್ತಿಗೆ ಅವಕಾಶವಿದೆ. ನಾಳೆಯ ನಂತರ ಶೇ. ೫೦ರಷ್ಟು ಭರ್ತಿಗೆ ಅವಕಾಶ ನೀಡಲಾಗುವುದು ಎಂದು ರಾಜ್ಯಸರ್ಕಾರ ಈ ಮೊದಲು ತಿಳಿಸಿತ್ತು.
ಈ ಹಿನ್ನೆಲೆಯಲ್ಲಿ ಸದಾಶಿವ ನಗರದಲ್ಲಿರುವ ಸಚಿವ ಸುಧಾಕರ್ ಅವರ ನಿವಾಸಕ್ಕೆ ಚಿತ್ರನಿರ್ಮಾಪಕರ ಸಂಘದ ಪದಾಧಿಕಾರಿಗಳು ಭೇಟಿ ಮಾಡಿ ಶೇ. ೧೦೦ ರಷ್ಟು ಪ್ರೇಕ್ಷಕರ ಭರ್ತಿ ಅವಧಿಯನ್ನು ಮುಂದುವರೆಸಬೇಕೆಂದು ಬೇಡಿಕೆ ಸಲ್ಲಿಸಿದರು.
ಮನವಿ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ಚಿತ್ರಮಂದಿರಗಳಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಿರುವುದರಿಂದ ಹಣ ವಾಪಸ್ ಕೊಡಲು ಆಗುವುದಿಲ್ಲ. ಆದ್ದರಿಂದ ಶೇ. ೧೦೦ ರಷ್ಟು ಪ್ರೇಕ್ಷಕರಿಗೆ ಏ. ೭ರವರೆಗೆ ಅವಕಾಶ ಕೊಡಿ ಎಂದು ನಿರ್ಮಾಪಕರ ಒತ್ತಾಯಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಇದಕ್ಕೆ ಒಪ್ಪಿಗೆ ಸೂಚಿಸಿದ್ದರು ಎಂದು ಹೇಳಿದ್ದರು.
ನಾಳೆಯ ನಂತರವೂ ಶೇ. ೧೦೦ರಷ್ಟು ಪ್ರೇಕ್ಷಕರಿಗೆ ಅನುವು ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಲಾಗಿದೆ ಎಂದರು.
ಮದುವೆ, ಛತ್ರ, ಸಭಾಂಗಣ ಸೇರಿದಂತೆ ಅನೇಕ ಕಡೆ ನಿರ್ಬಂಧವಿದ್ದು,ತಾಂತ್ರಿಕ ಸಲಹಾ ಸಮಿತಿಯ ಸಲಹೆ ಪಡೆದು ಚಿತ್ರಮಂದಿರಗಳಲ್ಲಿ ಶೇ. ೧೦೦ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ನಿರ್ಮಾಪಕರ ಸಂಘದ ಕಾರ್ಯದರ್ಶಿ ಕೆ. ಮಂಜು ಮಾತನಾಡಿ, ಚಿತ್ರಮಂದಿರಗಳು ಯಾವಾಗಲು ಭರ್ತಿಯಾಗಿರುವುದಿಲ್ಲ. ಮೊದಲ ದಿನ ಪ್ರೇಕ್ಷಕರು ಬರುತ್ತಾರೆ. ನಂತರ ಚಿತ್ರಮಂದಿರಗಳಲ್ಲಿ ಶೇ. ೪೦ ರಿಂದ ೫೦ ರಷ್ಟು ಪ್ರೇಕ್ಷಕರು ಮಾತ್ರ ಇರುತ್ತಾರೆ. ಹೀಗಾಗಿ, ಶೇ. ೫೦ ಸೀಟುಗಳ ನಿರ್ಬಂಧ ವಿದಿಸಬೇಡಿ ಎಂದು ಮನವಿ ಮಾಡಿದರು.