
ಚಿತ್ರದುರ್ಗ.ಏ.೧; ವಿಧಾನಸಭಾ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು, ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದೆ. ಚುನಾವಣೆಗೆ ಸಂಬಂಧಿಸಿದಂತೆ ಕಳೆದ ಮೂರು ತಿಂಗಳಿಂದಲೂ ಮತದಾರರ ಪಟ್ಟಿ, ಇವಿಎಂ ಯಂತ್ರ ಸೇರಿದಂತೆ ಎಲ್ಲ ರೀತಿಯ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಆಗಿರುವ ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ ಹೇಳಿದರು.ಇಲ್ಲಿನ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಚಿತ್ರದುರ್ಗ ನಗರಸಭೆ ವ್ಯಾಪ್ತಿಯಲ್ಲಿ 125 ಮತಗಟ್ಟೆಗಳು, ಗ್ರಾಮೀಣ ಭಾಗದ ವ್ಯಾಪ್ತಿಯಲ್ಲಿ 158 ಮತಗಟ್ಟೆಗಳು ಸೇರಿದಂತೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 283 ಮತಗಟ್ಟೆಗಳಿವೆ. 1,28,521 ಪುರುಷ ಮತದಾರರು, 1,31,572 ಮಹಿಳಾ ಮತದಾರರು ಹಾಗೂ 35 ಇತರೆ ಮತದಾರರು ಸೇರಿದಂತೆ ಒಟ್ಟು 2,60,128 ಮಂದಿ ಮತದಾರರಿದ್ದಾರೆ. ಇನ್ನೂ ಕೂಡ ಮತದಾರರ ಪಟ್ಟಿಗೆ ಸೇರ್ಪಡೆಗೆ ಅವಕಾಶ ಇದೆ ಎಂದು ತಿಳಿಸಿದರು.ನಗರಸಭೆ ಆಯುಕ್ತರು ಹಾಗೂ ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 283 ಮತಗಟ್ಟೆಗಳಲ್ಲಿ ಅಗತ್ಯವಾಗಿ ಇರಬೇಕಾದ ಎಲ್ಲ ಮೂಲಸೌಕರ್ಯ ಒದಗಿಸಿ ಮತಗಟ್ಟೆಗಳನ್ನು ಸುಸಜ್ಜಿತಗೊಳಿಸಿದ್ದಾರೆ ಎಂದರು.