ಚಿತ್ರದುರ್ಗ ನಗರಸಭೆ ಬಜೆಟ್ ಸಿದ್ಧತೆ : ರೂ.112.78 ಕೋಟಿ ಆಯವ್ಯಯ ಮಂಡನೆ


ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಫೆ.19; ಚಿತ್ರದುರ್ಗ ನಗರಸಭೆಯ 2024-25ನೇ ಸಾಲಿನ ಬಜೆಟ್‍ಗೆ ಸಂಬಂಧಿಸಿದ ಅಗತ್ಯ ಸಿದ್ದತೆಗಳನ್ನು ಪೌರಾಯುಕ್ತೆ ಎಂ.ರೇಣುಕಾ ಕೈಗೊಂಡಿದ್ದಾರೆ. ಈ ಬಾರಿ ರೂ.112.78 ಕೋಟಿ ಆಯವ್ಯಯ ಮಂಡನೆಯಾಗಲಿದ್ದು, ರಸ್ತೆ, ಚರಂಡಿ, ಕುಡಿಯುವ ನೀರು, ನೈರ್ಮಲೀಕರಣ, ನಗರ ಸೌಂದರ್ಯೀಕರಣಕ್ಕೆ ಹೆಚ್ಚಿನ ಅನುದಾನ ಮೀಸಲಿರಿಸಲಾಗಿದೆ.ಇಲ್ಲಿನ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಶನಿವಾರ ಈ ಕುರಿತು ನಗರಸಭೆ ಸದಸ್ಯರು ಹಾಗೂ ಸಾರ್ವಜನಿಕರೊಂದಿಗೆ ಸಮಾಲೋಚನೆ ಸಭೆ ನಡೆಯಿತು.ಆಸ್ತಿ ತೆರಿಗೆ, ನೀರಿನ ಶುಲ್ಕ, ಬಾಡಿಗೆ, ಉದ್ದಿಮೆ ಪರವಾನಿಗೆ, ಅಭಿವೃದ್ಧಿ ಶುಲ್ಕ ಹಾಗೂ ಇತರೆ ಆದಾಯಗಳು ಸೇರಿ ಒಟ್ಟು ರೂ.30.53 ಕೋಟಿ ನಗರಸಭೆಯ ಸ್ವಂತ ಆದಾಯವಿದೆ. ಇದರೊಂದಿಗೆ ರಾಜ್ಯ ಸರ್ಕಾರದಿಂದ ಎಸ್.ಎಫ್.ಸಿ, ನಗರೋತ್ಥಾನ ಹಾಗೂ ಡಿಎಂಎಫ್‍ಟಿ ಶಾಸಕರ ಅನುದಾನ ಸೇರಿ ರೂ.71.20 ಕೋಟಿ ಅನುದಾನ ನಗರಸಭೆಗೆ ದೊರಕಲಿದೆ. ಹಾಗೂ ಕೇಂದ್ರ ಸರ್ಕಾರದ 15ನೇ ಹಣಕಾಸು, ನಲ್ಮ್, ಸ್ವಚ್ಛ ಭಾರತ್ ಮಿಷನ್ ಹಾಗೂ ಇತರೆ ಅನುದಾನಗಳಿಡಿ ಅಡಿ ರೂ.11.05 ಕೋಟಿ ಅನುದಾನ ನಗರಸಭೆ ಲಭ್ಯವಾಗಲಿದ್ದು, ಒಟ್ಟು ರೂ.112.78 ಕೋಟಿ ಆದಾಯದ ನಿರೀಕ್ಷೆಯೊಂದಿಗೆ ಆಯವ್ಯಯ ಮಂಡನೆಗೆ ಸಿದ್ಧತೆ ನಡೆಸಿಕೊಳ್ಳಲಾಗಿದೆ.ನಗರದ ಬೀದಿ ದೀಪ, ನೀರು ಸರಬರಾಜು, ನಗರಸಭೆ ಸಂಬಂಧಿಸಿದ ಕಚೇರಿ, ಕಟ್ಟಡ, ಗ್ರಂಥಾಲಯಗಳ ವಿದ್ಯುತ್ ಪಾವತಿಗಾಗಿ ರೂ.21 ಕೋಟಿ ಅನುದಾನ ಮೀಸಲಿರಿಸಲಾಗಿದೆ. ನಗರದ ರಸ್ತೆಗಳ ಅಭಿವೃದ್ಧಿಗಾಗಿ ರೂ.18.75 ಕೋಟಿ, ತಾಜ್ಯ ನಿರ್ವಹಣೆ, ತಾಜ್ಯ ಸಂಗ್ರಹಣೆ ವಾಹನಗಳು, ಶೌಚಾಲಯಗಳ ಅಭಿವೃದ್ಧಿ, ಹೊರಗುತ್ತಿಗೆ ನೌಕರರ ವೇತನ, ಇಂಧನ ಸೇರಿ ನಗರದ ನೈರ್ಮಲೀಕರಣ ಕಾರ್ಯಗಳಿಗೆ ಒಟ್ಟು ರೂ.13.50 ಕೋಟಿ, ನಗರಸಭೆಯ ಸಿಬ್ಬಂದಿ ವೇತನಕ್ಕಾಗಿ ರೂ.10 ಕೋಟಿ, ನಗರದ ಸೌಂದರ್ಯೀಕರಣ, ಆಟೋರಿಕ್ಷಾ ನಿಲುಗಡೆ, ಪಾರ್ಕಿಂಗ್,  ಖಾಸಗಿ ಬಸ್ ನವೀಕರಣ, ನಾಮಫಲಕಗಳ ಅಳವಡಿಕೆ, ನಗರ ಪ್ರಮುಖ ವೃತ್ತಗಳ ಅಭಿವೃದ್ಧಿಗಾಗಿ ಒಟ್ಟು ರೂ.7 ಕೋಟಿ ಅನುದಾನಗಳನ್ನು ಪ್ರಮುಖವಾಗಿ ಆಯವ್ಯಯದಲ್ಲಿ ಒದಗಿಸಲಾಗಿದೆ.ನಗರದ ಚರಂಡಿ ಹಾಗೂ ಒಳಚರಂಡಿಗಳ ನಿರ್ಮಾಣ ಹಾಗೂ ನಿರ್ವಹಣೆಗಾಗಿ ರೂ.9 ಕೋಟಿ, ನೀರು ನಿರ್ವಹಣೆ ಮತ್ತು ಅಭಿವೃದ್ಧಿ ಕಾಮಗಾರಿಗಳು, ದಾಸ್ತಾನು ಖರೀದಿ ಹಾಗೂ ಹೊರಗುತ್ತಿಗೆ ನೌಕರರ ವೇತನಕ್ಕಾಗಿ ರೂ.8 ಕೋಟಿ, ಉದ್ಯಾನವನ ಮತ್ತು ರುದ್ರಭೂಮಿ ಅಭಿವೃದ್ಧ್ದಿಗೆ ರೂ.3.25 ಕೋಟಿ, ಬೀದಿ ದೀಪಗಳ ಅಳವಡಿಕೆಗೆ ರೂ.3 ಕೋಟಿ ಅನುದಾನವನ್ನು ಆಯವ್ಯಯದಲ್ಲಿ ಇರಿಸಲಾಗಿದೆ.ಕಚೇರಿ ವೆಚ್ಚಗಳ ನಿರ್ವಹಣೆಗೆ ರೂ.3.75 ಕೋಟಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ವಿಶೇಷ ಚೇತನರ ಕಲ್ಯಾಣಕ್ಕಾಗಿ ರೂ.1.50 ಕೋಟಿ,  ಸ್ವಚ್ಛ ಭಾರತ್ ಮಿಷನ್‍ಗೆ ರೂ.1.50ಕೋಟಿ, ಜಾಹೀರಾತು ಹಾಗೂ ಇತರೆ ವೆಚ್ಚಗಳಿಗೆ ರೂ.1 ಕೋಟಿ, ಹಾಗೂ ನಲ್ಮ್ ಯೋಜನೆಗೆ ರೂ.50 ಲಕ್ಷ ಅನುದಾನ ಆಯವ್ಯಯದಲ್ಲಿ ಖರ್ಚಾಗುವ ನಿರೀಕ್ಷೆಯಿದೆ.ರಾಜ್ಯ ಸರ್ಕಾರಕ್ಕೆ ರೂ.3.75 ಕೋಟಿ ಸೆಸ್ ಹಾಗೂ ರೂ.1 ಕೋಟಿ ಬಾಕಿ ಪಾವತಿಯನ್ನು ಈ ಬಾರಿಯ ಆಯವ್ಯಯದಲ್ಲಿ ಮಾಡಲಾಗುವುದು.ನಗರ ಹಸರೀಕರಣಕ್ಕೆ ಪಣ : ಈ ಹಿಂದೆ ನಗರದ ಅಭಿವೃದ್ಧಿಗಾಗಿ ಹೆಚ್ಚಿನ ಗಿಡ ಮರಗಳನ್ನು ಕಡೆಯಲಾಗಿದೆ. ನಗರದಲ್ಲಿ ಗಿಡ ಮರಗಳನ್ನು ಬೆಳೆಸಲು ನಗರಸಭೆಯಿಂದ ಯೋಜನೆ ರೂಪಿಸುವಂತೆ ನಗರಸಭಾ ಸದಸ್ಯರು ಸಭೆಯಲ್ಲಿ ಸಲಹೆ ನೀಡಿದರು.ನಗರಸಭೆ ವತಿಯಿಂದ ಉದ್ಯಾನವನ ಸೇರಿದಂತೆ ನಗರಸಭೆ ವ್ಯಾಪ್ತಿಯ ಜಾಗಗಳಲ್ಲಿ ಗಿಡಗಳ ನೆಡಲು ಕ್ರಮವಹಿಸಲಾಗುವುದು. ಇದರ ಜೊತೆಗೆ ಟಾರ್ಗೆಟ್ ಯುವ ವೇದಿಕೆ ನೆಟ್ಟ ಗಿಡಗಳ ರಕ್ಷಣೆಗೆ ನಗರಸಭೆ ಕ್ರಮ ಕೈಗೊಂಡಿದೆ. ಈ ಗಿಡಗಳಿಗೆ ಎಸ್.ಟಿ.ಪಿ ಪ್ಲಾಂಟ್‍ಗಳಲ್ಲಿ ಶುದ್ಧೀಕರಿಸಿ ನೀರನ್ನು ಉಣಿಸಲು ಪ್ರತ್ಯೇಕವಾಗಿ ಟ್ಯಾಂಕರ್ ಮೀಸಲಿಡಲಾಗುವುದು ಎಂದು ಪೌರಾಯುಕ್ತೆ ರೇಣುಕಾ.ಎಂ ತಿಳಿಸಿದರು.