ಚಿತ್ರದುರ್ಗ ನಗರಸಭೆ: ನೂತನ ಉಪಾಧ್ಯಕ್ಷರಾಗಿ ಕೆ.ಮಂಜುಳಾ ಆಯ್ಕೆ

ಚಿತ್ರದುರ್ಗ.ಜೂ.೨೩:  ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ  ನಡೆದ ಚಿತ್ರದುರ್ಗ ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ 6ನೇ ವಾರ್ಡ್ ನಗರಸಭೆ ಸದಸ್ಯೆ ಕೆ.ಮಂಜುಳಾ ಅವರು ಅವಿರೋಧವಾಗಿ ಆಯ್ಕೆಯಾದರು.ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ ಅವರು ಚಿತ್ರದುರ್ಗ ನಗರಸಭೆ ಉಪಾಧ್ಯಕ್ಷೆಯಾಗಿ ಕೆ.ಮಂಜುಳಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.ಈ ಹಿಂದೆ ನಗರಸಭೆಯ ಉಪಾಧ್ಯಕ್ಷರಾಗಿದ್ದ ಅನುರಾಧಾ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷ ಸ್ಥಾನವು ಹಿಂದುಳಿದ ವರ್ಗಗಳ “ಎ” ಮೀಸಲಾಗಿದೆ.
ಬುಧವಾರ ಬೆಳಿಗ್ಗೆ 10 ರಿಂದ 11 ರವೆರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ನಗರಸಭೆಯ 6ನೇ ವಾರ್ಡ್ ಸದಸ್ಯೆ ಕೆ.ಮಂಜುಳಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಮಧ್ಯಾಹ್ನ 1ಕ್ಕೆ ಚುನಾವಣಾಧಿಕಾರಿಗಳು ನಾಮಪತ್ರ ಸಲ್ಲಿಕೆಯು ಕ್ರಮಬದ್ಧವಾಗಿದ್ದು, ಒಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಕರ್ನಾಟಕ ಪೌರಸಭೆ ಹಾಗೂ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗಳು-1977 ನಿಯಮಗಳ ಸೆಕ್ಷನ್-1ರ ಅಡಿ ಕೇವಲ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿರುವುದರಿಂದ ಚುನಾವಣೆ ಅವಶ್ಯಕತೆ ಇರುವುದಿಲ್ಲ. ಹಾಗಾಗಿ ಉಪಾಧ್ಯಕ್ಷರ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದರು.  
35 ಮಂದಿ ಚುನಾಯಿತ ನಗರಸಭೆ ಸದಸ್ಯರು, ಶಾಸಕರು ಹಾಗೂ ಸಂಸದರು ಸೇರಿ ಒಟ್ಟು 37 ಜನ ಮತದಾನದ ಹಕ್ಕನ್ನು ಹೊಂದಿದ್ದು, ಉಪಾಧ್ಯಕ್ಷರ ಚುನಾವಣಾ ಸಭೆಯಲ್ಲಿ 26 ಮಂದಿ ಸದಸ್ಯರು ಹಾಜರಾಗಿದ್ದರು. 11 ಸದಸ್ಯರು ಗೈರಾಗಿದ್ದರು.
ನಗರಸಭೆ ನೂತನ ಉಪಾಧ್ಯಕ್ಷೆ ಕೆ.ಮಂಜುಳಾ ಮಾತನಾಡಿ, ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವುದಕ್ಕೆ ಸಂತೋಷವಾಗಿದೆ. ಆಯ್ಕೆಯಾಗಲು ಸಹಕರಿಸಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹಾಗೂ ನಗರಸಭೆ ಸದಸ್ಯರಿಗೆ ಧನ್ಯವಾದ ಸಲ್ಲಿಸಿದ ಅವರು, ಚಿತ್ರದುರ್ಗ ನಗರದ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದರ ಮೂಲಕ ನಗರದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.