ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್: 59ನೇ ಸರ್ವ ಸದಸ್ಯರ ಸಭೆ

ಚಿತ್ರದುರ್ಗ.ಸೆ.೪; ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ 59 ನೇ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯು ಬ್ಯಾಂಕಿನ ಅಧ್ಯಕ್ಷರಾದ ಡಿ.ಸುಧಾಕರ್ ಅಧ್ಯಕ್ಷತೆಯಲ್ಲಿ ಚಿತ್ರದುರ್ಗ ನಗರದ ಶ್ರೀರಾಮ ಕಲ್ಯಾಣ ಮಂಟಪದಲ್ಲಿ  ನಡೆಯಿತು.  ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷರಾದ ಡಿ.ಸುಧಾಕರ್ ಮಾತನಾಡಿ, ಬ್ಯಾಂಕ್ 2021-22 ನೇ ಸಾಲಿಗೆ ರೂ.490.19 ಲಕ್ಷ ಲಾಭಗಳಿಸಿರುತ್ತದೆ. ಬ್ಯಾಂಕ್ 2021-22 ನೇ ಸಾಲಿಗೆ 441 ಕೋಟಿ ಠೇವಣಿ ಸಂಗ್ರಹಣೆ ಮಾಡಿದ್ದು, 55448 ರೈತರಿಗೆ ಶೂನ್ಯ ಬಡ್ಡಿದರದಲ್ಲಿ ರೂ.400.27 ಕೋಟಿ ಅಲ್ಪಾವಧಿ ಬೆಳೆ ಸಾಲ ವಿತರಣೆ ಮಾಡಿದೆ. ಹಾಗೂ ಶೇ.3% ಬಡ್ಡಿದರದಲ್ಲಿ 1351 ರೈತರಿಗೆ ರೂ.81.39 ಕೋಟಿ ಭೂ ಅಭಿವೃದ್ದಿ ಮದ್ಯಮಾವಧಿ ಕೃಷಿ ಸಾಲ ವಿತರಿಸಿದೆ. ಕೋವಿಡ್ ಸಂಕಷ್ಟದ ನಡುವೆಯು ಬ್ಯಾಂಕ್ 2021-22 ನೇ ಸಾಲಿನಲ್ಲಿ ರೂ.490.19 ಲಕ್ಷ ಲಾಭಗಳಿಸುವುದರ ಮೂಲಕ ಉತ್ತಮ ಸಾಧನೆ ಮಾಡಿರುತ್ತದೆ ಎಂದರು.ಚಳ್ಳಕೆರೆ ವಿಧಾನ ಸಭೆ ಕ್ಷೇತ್ರದ ಶಾಸಕರು ಹಾಗೂ ಬ್ಯಾಂಕಿನ ನಿರ್ದೇಶಕರಾದ ಟಿ.ರಘುಮೂರ್ತಿ ಮಾತನಾಡಿ, ಬ್ಯಾಂಕ್ ವರ್ಷದಿಂದ  ವರ್ಷಕ್ಕೆ ಅಭಿವೃದ್ದಿಯತ್ತ ಸಾಗುತ್ತಿದ್ದು 8 ವರ್ಷಗಳಿಂದೀಚೆಗೆ  ಸತತವಾಗಿ ಲಾಭದಲ್ಲಿ ಮುನ್ನೆಡೆಯುತ್ತಿದೆ. ಬ್ಯಾಂಕಿನಿಂದ ಜಿಲ್ಲೆಯ ರೈತರಿಗೆ ಸುಮಾರು 600.00 ಕೋಟಿ ಸಾಲವನ್ನು ನೀಡಲಾಗಿದೆ. ಹಿರಿಯೂರು ತಾಲ್ಲೂಕಿನಲ್ಲಿ ಇರುವ ವಾಣಿವಿಲಾಸ ಸಾಗರ ಜಲಾಶಯದ ಕೋಡಿ ಬಿದ್ದು  ತುಂಬಿರುತ್ತದೆ. ಪಸ್ತುತ ಭದ್ರ ಮೇಲ್ದಂಡೆ ಯೋಜನೆ ಪೂರ್ಣವಾಗುವ ಹಂತದಲ್ಲಿದ್ದು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಕುಡಿಯುವ ನೀರು ಹಾಗೂ ಕೃಷಿಗೆ ಅನುಕೂಲವಾಗಲಿದ್ದು ರೈತರು ಹೆಚ್ಚಿನ  ಸಾಲ ಪಡೆದು ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು.ಸಭೆಯಲ್ಲಿ ಶಾಸಕರು ಹಾಗೂ ನಿರ್ದೇಶಕರಾದ  ಟಿ.ರಘುಮೂರ್ತಿ, ಉಪಾಧ್ಯಕ್ಷರಾದ ಹೆಚ್.ಬಿ.ಮಂಜುನಾಥ್, ನಿರ್ದೇಶಕರಾದ ಟಿ.ಮಹಾಂತೇಶ್, ಹೆಚ್.ಟಿ.ನಾಗರೆಡ್ಡಿ, ನಿಶಾನಿಜಯಣ್ಣ, ಶ್ರೀರಘುರಾಮ ರೆಡ್ಡಿ, ಹಾಗೂ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರು ಉಪಸ್ಥಿತರಿದ್ದರು