ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ 36 ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿ ಔಷಧಿ ಲಭ್ಯ

ಚಿತ್ರದುರ್ಗ,ಮೇ.4: ಕಳೆದ ಸಾಲಿಗಿಂತ ಈ ವರ್ಷ ಕೋವಿಡ್-19 ವೈರಸ್ ಎರಡನೇ ಅಲೆಯು ಭೀಕರವಾಗಿದ್ದು, ವ್ಯಾಪಕವಾಗಿ ಹರಡುತ್ತಿದೆ. ಇದರಿಂದ ಜಿಲ್ಲೆಯ ಜನರು ಮುಂಜಾಗ್ರತಾ ಕ್ರಮವಾಗಿ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವುದು ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ಈ ವರ್ಷವೂ ಸಹ “ಸಂಶಮನಿವಟಿ ಹಾಗೂ ಆರ್ಕ್ ಈ ಅಜೀಬ್” ಎಂಬ ರೋಗನಿರೋಧಕ ಶಕ್ತಿ ಉಳ್ಳ ಆಯುಷ್ ಔಷಧಿಗಳನ್ನು ಸಾರ್ವಜನಿಕರಿಗೆ ವಿತರಿಸಲು ಜಿಲ್ಲಾ ಆಯುಷ್ ಇಲಾಖೆ ಮುಂದಾಗಿದೆ.
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಇರುವ ಎಲ್ಲಾ 36 ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಗಳಲ್ಲಿ ಆಯುಷ್ ಔಷಧಿ ಲಭ್ಯವಿರುವಂತೆ ಆಯುಷ್ ಇಲಾಖೆ ಕ್ರಮಕೈಗೊಂಡಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ತಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದಾಗಿದೆ.
ಕಳೆದ ವರ್ಷ ಇದೇ ಸಂದರ್ಭದಲ್ಲಿ ಆಯುಷ್ ಇಲಾಖೆ ವತಿಯಿಂದ ಸಂಶಮನಿ ವಟಿ ಮತ್ತು ಅರ್ಕ್ ಈ ಅಜೀಬ್ ಔಷಧಿಗಳನ್ನು ಎಲ್ಲಾ ಮುಂಚೂಣಿಯಲ್ಲಿರುವ ಇಲಾಖೆಗಳಿಗೆ ಒದಗಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅನುಕೂಲ ಮಾಡಿಕೊಡಲಾಗಿರುತ್ತದೆ. ಈ ಬಾರಿ ಆಯುಷ್ ಔಷಧಿಗಳನ್ನು ಜಿಲ್ಲೆಯ ಸಾರ್ವಜನಿಕರಿಗೆ ವಿತರಿಸಲಾಗುವುದು.
ಔಷಧಿಗಳು ಸಿಗುವ ಸ್ಥಳ:
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಇರುವ ಎಲ್ಲಾ 36 ಸರ್ಕಾರಿ ಆಯುರ್ವೇದ ಆಸ್ಪತ್ರೆ ಹಾಗೂ ಚಿಕಿತ್ಸಾಲಯಗಳಲ್ಲಿ ಆಯುಷ್ ಔಷಧಿ ಲಭ್ಯವಿದೆ. ಔಷಧಿಗಳು ಸಿಗುವ ಸ್ಥಳದ ವಿವಿರ ಇಂತಿದೆ. ಚಿತ್ರದುರ್ಗ ತಾಲ್ಲೂಕಿನ ಜೆ.ಎನ್.ಕೋಟೆ, ಅಳಗವಾಡಿ, ಕೊಳಾಳ್, ಡಿ.ಹೆಚ್.ಹಟ್ಟಿ, ಕೋಗುಂಡೆ. ಹಿರಿಯೂರು ತಾಲ್ಲೂಕಿನ ಹಿರಿಯೂರು, ಐಮಂಗಲ, ಬುರುಡುಕುಂಟೆ, ಸೊಂಡೆಕೆರೆ, ಮ್ಯಾಕ್ಲೂರಹಳ್ಳಿ, ಬ್ಯಾಡರಹಳ್ಳಿ. ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆ, ಚಿಕ್ಕಮಧುರೆ, ಬೆಳೆಗೆರೆ, ನನ್ನಿವಾಳ, ಟಿ.ಪಿ.ಹಳ್ಳಿ, ಟಿ.ಎನ್.ಕೋಟೆ, ಮಲ್ಲೂರಹಳ್ಳಿ, ಅಬ್ಬೇನಹಳ್ಳಿ, ಹುಲಿಕುಂಟೆ, ಓಬಳಾಪುರ, ಹಿರೇಹಳ್ಳಿ, ಘಟಪರ್ತಿ, ಪಿ.ಎಂ.ಪುರ. ಮೊಳಕಾಲ್ಮುರು ತಾಲ್ಲೂಕಿನ ದೇವಸಮುದ್ರ. ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿ, ಮಾಳೇನಹಳ್ಳಿ, ಬಿ.ಬಿ.ಹಳ್ಳಿ, ಗೂಳಿಹೊಸಹಳ್ಳಿ. ಹೊಸದುರ್ಗ ತಾಲ್ಲೂಕಿನ ಹೊಸದುರ್ಗ, ತಂಡಗ, ಆಲಘಟ್ಟ, ದೊಡ್ಡಘಟ್ಟ, ಡಿ.ಟಿ.ವಟ್ಟಿ, ಕಂಗುವಳ್ಳಿ, ಬುಕ್ಕಸಾಗರ, ಹೆಬ್ಬಳ್ಳಿ ಸೇರಿದಂತೆ ಜಿಲ್ಲಾ ವ್ಯಾಪ್ತಿಯ ಎಲ್ಲ 36 ಸರ್ಕಾರಿ ಆಯುರ್ವೇದ ಆಸ್ಪತ್ರೆ ಹಾಗೂ ಚಿಕಿತ್ಸಾಲಯಗಳಲ್ಲಿ ಔಷಧಿ ದೊರೆಯಲಿದೆ.
ಕೋವಿಡ್-19 ಸಾರ್ವಜನಿಕ ವಲಯದಲ್ಲಿ ಈಗಾಗಲೇ ಸಾಕಷ್ಟು ತೊಂದರೆಯನ್ನು ಮತ್ತು ನಷ್ಟ ಕಷ್ಟಗಳನ್ನು ಕೊಟ್ಟಿದೆ. ತಮಗೆಲ್ಲಾ ಗೊತ್ತಿರುವ ಹಾಗೆ ವಿಶೇಷವಾಗಿ ಚಿಕಿತ್ಸೆ ಕಷ್ಟ ಸಾಧ್ಯವಾಗಿರುವುದರಿಂದ ಇದನ್ನು ಪ್ರಾರಂಭದಲ್ಲಿ ನಾವು ತಡೆಗಟ್ಟುವುದು ಒಂದೇ ಇದಕ್ಕೆ ಉಳಿದಿರುವ ಮಾರ್ಗವಾಗಿದೆ. ಸರ್ಕಾರದ ಮಾರ್ಗದರ್ಶನದಂತೆ ಸ್ಯಾನಿಟೈಸರ್, ಮಾಸ್ಕ್ ಮತ್ತು ದೈಹಿಕ ಅಂತರ ಅನುಸರಿಸುವುದು. ವಿಶೇಷವಾಗಿ ಜನಸಂದಣಿ ಇರುವಲ್ಲಿ ಹಾಗೂ ಸಾರ್ವಜನಿಕರ ಜೊತೆ ಸಂಪರ್ಕ ಸಾಧಿಸುವ ಸಂದರ್ಭದಲ್ಲಿ ಈ ಒಂದು ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಅನುಸರಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಆದರೂ ಸಹ ನಮ್ಮ ದೇಹಕ್ಕೆ ಬೇಕಾದಂತಹ ರೋಗ ನಿರೋಧಕ ಶಕ್ತಿ ಕುಂದಿದಾಗ ಅಥವಾ ಕಡಿಮೆಯಾದಾಗ ಸ್ವಾಭಾವಿಕವಾಗಿ ಎಲ್ಲಾ ತರಹದ ವೈರಾಣುಗಳು ನಮ್ಮ ದೇಹವನ್ನು ಮೂಗಿನ ಮುಖಾಂತರ ಮತ್ತು ಬಾಯಿಯ ಮುಖಾಂತರ ಶ್ವಾಸಕೋಶವನ್ನು ಸೇರಿ ಅನೇಕ ಅನೇಕ ತೊಂದರೆಯನ್ನು ಉಂಟುಮಾಡಿ ಕಡೆಗೆ ಸಾವನ್ನು ಕೂಡ ತರುತ್ತಿರುವುದು ಇತ್ತೀಚಿನ ದಿನಗಳಲ್ಲಿ ನಾವು ದಿನ ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಮುಖ್ಯವಾಗಿ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿರುವುದೇ ಮೂಲಕ ಕಾರಣವಾಗಿದ್ದು, ಇದನ್ನು ಆಯುಷ್ ಚಿಕಿತ್ಸೆ ಮೂಲಕ ಉತ್ತೇಜನಗೊಳಿಸಬಹುದು. ನಾವು ತಿನ್ನುವ ಆಹಾರ, ಆಹಾರದಲ್ಲಿ ಯಥೇಚ್ಛವಾಗಿ ಹಣ್ಣುಹಂಪಲುಗಳನ್ನು ಅದರಲ್ಲೂ ವಿಟಮಿನ್ ಸಿ ಇರತಕ್ಕಂತ ಹಣ್ಣುಗಳನ್ನು ಮತ್ತು ಪದಾರ್ಥಗಳನ್ನು ಉಪಯೋಗಿಸುವುದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅನುಕೂಲವಾಗುತ್ತದೆ. ನಮ್ಮ-ನಿಮ್ಮೆಲ್ಲರ ಕೈಗೆ ಎಟುಕುವಂತಹ ಬೆಟ್ಟದ ನೆಲ್ಲಿಕಾಯಿ ಮತ್ತು ಮನೆಯಲ್ಲಿ ಸಿಗುವಂತಹ ಕಾಳುಮೆಣಸು, ಅರಿಶಿನ, ಶುಂಠಿ ಮುಂತಾದ ಸಾಂಬಾರ ಪದಾರ್ಥಗಳನ್ನು ಉಪಯೋಗಿಸಿಕೊಂಡು ಕಷಾಯ ಮಾಡಿಕೊಂಡು ಕುಡಿಯುವುದರೊಂದಿಗೆ ನಮ್ಮ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಆಯುಷ್ ಇಲಾಖೆ ಸಲಹೆ ನೀಡಿದೆ.
ಆಯುಷ್ ಔಷಧಿ ಸದುಪಯೋಗ ಪಡೆಯಲು ಸಲಹೆ:
ಸಾರ್ವಜನಿಕರು ಆಯುಷ್ ಔಷಧಿಗಳ ಸದುಪಯೋಗ ಪಡೆದುಕೊಂಡು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ರೋಗ ಬರದಂತೆ ತಡೆದುಕೊಳ್ಳಲು ಪ್ರಯತ್ನಿಸಬೇಕು ಎಂದು ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ.ಕೆ.ಎಲ್.ವಿಶ್ವನಾಥ್ ತಿಳಿಸಿದ್ದಾರೆ.
ಕೋವಿಡ್‍ಗೆ ಸಂಬಂಧಪಟ್ಟಂತೆ ಮುಂಜಾಗ್ರತಾ ಕ್ರಮವನ್ನು ಆಯುಷ್ ಪದ್ಧತಿಗಳಿಂದ ಹೇಗೆ ವಹಿಸುವುದು ಎನ್ನುವುದನ್ನು ಕೂಡ ಆಯುಷ್ ಇಲಾಖೆಯ ವೈದ್ಯರುಗಳು ತಿಳಿಸಿಕೊಡುವರು. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು. ಕಾಯಿಲೆ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ಕಾಯಿಲೆ ಬರುವುದಕ್ಕಿಂತ ಮೊದಲೇ ಮುಂಜಾಗ್ರತೆ ವಹಿಸುವುದು ಒಳ್ಳೆಯದು ಎನ್ನುತ್ತಾರೆ ಅವರು.