ಚಿತ್ರದುರ್ಗ ಜಿಲ್ಲಾಡಳಿತದಿಂದ ವಿಶ್ವ ಪರಿಸರ ದಿನಾಚರಣೆ

ಚಿತ್ರದುರ್ಗ,ಜೂ.6; ಚಿತ್ರದುರ್ಗ ಜಿಲ್ಲಾಡಳಿತ ಮತ್ತು ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ನಗರದ ಭಗತ್ ಸಿಂಗ್ ಉದ್ಯಾನವನದ ಆವರಣದಲ್ಲಿ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಅವರು ಗಿಡ ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆ ಹಾಗೂ ವನ ಮಹೋತ್ಸವಕ್ಕೆ ಚಾಲನೆ ನೀಡಿದರು.  
 ಚಿತ್ರದುರ್ಗ ಸಾಮಾಜಿಕ ಅರಣ್ಯ ವಿಭಾಗದ ವತಿಯಿಂದ ಪ್ರಸ್ತುತ ಸಾಲಿನಲ್ಲಿ ಅರಣ್ಯೀಕರಣ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಈ ಕಾಮಗಾರಿಯನ್ನು ರಸ್ತೆಬದಿ, ಶಾಲಾ ಆವರಣ, ಕೃಷಿ ಅರಣ್ಯ, ಗೋಮಾಳ ಮತ್ತು ಇತರೆ ಸರ್ಕಾರಿ ಜಾಗಗಳಲ್ಲಿ ಅರಣ್ಯೀಕರಣ ಮಾಡಲು ಗುರಿ ಹೊಂದಲಾಗಿದೆ.
  ಈ ಸಂಬಂಧ ವಲಯದ ಎಲ್ಲಾ ತಾಲ್ಲೂಕಿನ ನರ್ಸರಿಗಳಲ್ಲಿ ಸಸಿಗಳನ್ನು ಬೆಳೆಸಲಾಗಿರುತ್ತದೆ. ಕಾಡು ಜಾತಿಯ ಸಸಿಗಳಾದ ಬೇವು, ಅರಳಿ, ಆಲ, ಹೊಂಗೆ, ಗೋಣಿ, ಬಸವನಪಾದ ಮತ್ತು ಇತರೆ ಜಾತಿಯ ಸಸಿಗಳನ್ನು 14*20 ಗಾತ್ರದ ಬ್ಯಾಗ್‍ನಲ್ಲಿ ಬೆಳೆಸಿದ್ದು ರಸ್ತೆಬದಿಯಲ್ಲಿ ನೆಡಲು ಉದ್ದೇಶಿಸಲಾಗಿರುತ್ತದೆ. ಅದೇ ರೀತಿ ಶಾಲಾ ಆವರಣ ಮತ್ತು ಇತರೆ ಸರ್ಕಾರಿ ಜಾಗಗಳಲ್ಲಿ ಹಣ್ಣಿನ ಜಾತಿಯ ಸಸಿಗಳಾದ ಹಲಸು, ಮಾವು, ನೇರಳೆ, ಚೆರ್ರಿ, ಹೊಂಗೆ ಮತ್ತು ಇತರೆ ಜಾತಿಯ ಸಸಿಗಳನ್ನು 10*16 ಗಾತ್ರದ ಬ್ಯಾಗ್‍ಗಳಲ್ಲಿ ಬೆಳೆಸಲಾಗಿದೆ.
  ಚಿತ್ರದುರ್ಗ ಜಿಲ್ಲೆಯ ಎಲ್ಲಾ ರೈತರಿಗೆ ಅನುಕೂಲವಾಗಲೆಂದು ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಹೆಬ್ಬೇವು, ಸಿಲ್ವರ್ ಓಕ್, ರಕ್ತಚಂದನ, ತೇಗ, ಶ್ರೀಗಂಧ, ನುಗ್ಗೆ, ಅಗಸೆ, ಮತ್ತು ಇತರೆ ಜಾತಿಯ ಸಸಿಗಳನ್ನು 8*12 & 6*9 ಗಾತ್ರದ ಬ್ಯಾಗ್‍ಗಳಲ್ಲಿ ಬೆಳೆಸಲಾಗಿದೆ.
  ಚಿತ್ರದುರ್ಗ ಸಾಮಾಜಿಕ ಅರಣ್ಯ ವಲಯದ ಐನಹಳ್ಳಿ ಸಸ್ಯಕ್ಷೇತ್ರದಲ್ಲಿ ರೈತರಿಗೆ ಅರಣ್ಯ ಸಸಿ ಮತ್ತು ರೇಷ್ಮ ಸಸಿಗಳನ್ನು ಶನಿವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ ಅವರ ಸಮ್ಮಖದಲ್ಲಿ ವಿತರಣೆ ಮಾಡಲಾಯಿತು.
 ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಕೆ.ಚೋಳರಾಜಪ್ಪ ಮಾತನಾಡಿ, ಜಿಲ್ಲೆಯ ಎಲ್ಲಾ ರೈತರುಗಳು ತಮ್ಮ ಜಮೀನುಗಳಲ್ಲಿ ಕೃಷಿ ಅರಣ್ಯ ಕಾಮಗಾರಿಗಳನ್ನು ಕೈಗೊಳ್ಳಲು ರೇಷ್ಮೆ ಸಸಿಗಳು ಸಹ ಲಭ್ಯವಿದ್ದು, ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.  
ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು.