ಚಿತ್ರದುರ್ಗ ಜನತೆ ನೀಡಿದ ಬೀಳ್ಕೊಡುಗೆ ಜೀವನದಲ್ಲಿ ಮರೆಯಲಾಗದ ಮಧುರ ಕ್ಷಣ


ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಫೆ.22; ರಾಜ್ಯದಲ್ಲಿ  ಕಳೆದ  12  ವರ್ಷಗಳಿಂದ  ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಲಾಗಿದ್ದು,  ವರ್ಗಾವಣೆಯಾದ ಸಂದರ್ಭದಲ್ಲಿ ಬಿಳ್ಳೋಡುಗೆ ನಡೆಯುತ್ತದೆ. ಆದರೆ ಚಿತ್ರದುರ್ಗದ ಜನರು ನೀಡಿದ ಬೀಳ್ಕೊಡುಗೆ ಸಮಾರಂಭ  ನನ್ನ ಜೀವನದಲ್ಲಿ ಮರೆಯಲಾಗದ  ಮಧುರ ಕ್ಷಣ  ಎಂದು ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ ಸೇವೆ  ಸಲ್ಲಿಸಿ ಧಾರವಾಡಕ್ಕೆ ವರ್ಗಾವಣೆಯಾಗಿರುವ ದಿವ್ಯಪ್ರಭು ಜಿ.ಆರ್.ಜೆ  ಸಂತಸ ವ್ಯಕ್ತಪಡಿಸಿದರು.ನಗರದ  ತ.ರಾ.ಸು ರಂಗಮಂದಿರದಲ್ಲಿ  ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾಂಭದಲ್ಲಿ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಅವರು,  ವರ್ಗಾವಣೆಯಾಗುವುದು ಸಹಜ. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ವರ್ಗಾವಣೆಯಾದಾಗ ಅಧಿಕಾರಿಗಳು, ಸಿಬ್ಬಂದಿಗಳು ಸೇರಿ ಆಸಕ್ತಿವಹಿಸಿ ಬೀಳ್ಕೊಡುಗೆ ನೀಡುವುದನ್ನು ನೋಡಿದ್ದೇನೆ. ಆದರೆ ಚಿತ್ರದುರ್ಗ ಜಿಲ್ಲೆಯಿಂದ ವರ್ಗಾವಣೆಯಾದ ನಂತರವೂ ಸಹ ವಿವಿಧ ಸಂಘ-ಸಂಸ್ಥೆಗಳು, ವಿದ್ಯಾರ್ಥಿಗಳು  ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ಜನರೆಲ್ಲರೂ ಸೇರಿ ನನಗೆ ಇಂತಹ ಅಭೂತ ಪೂರ್ವವಾದ ಬೀಳ್ಕೊಡುಗೆ ನೀಡಿರುವುದನ್ನು ಎಂದಿಗೂ  ಮರೆಯುವುದಿಲ್ಲ ಎಂದು ತಿಳಿಸಿದ ಅವರು,  ಇಲ್ಲಿಯವರೆಗೂ  ನನ್ನ ತವರು ಮನೆ ತಮಿಳುನಾಡು ಎಂದು ಹೇಳುತ್ತಿದ್ದೆ. ಇನ್ನೂ ಮುಂದೆ ಚಿತ್ರದುರ್ಗ ನನ್ನ ತವರು ಮನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಅಷ್ಟೋಂದು ಪ್ರೀತಿ, ವಿಶ್ವಾಸವನ್ನು ತಮ್ಮ ಅಭಿಮಾನ ವ್ಯಕ್ತಪಡಿಸಿರುವುದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಅನಿಸಿಕೆ ವ್ಯಕ್ತಪಡಿಸಿದರು.