ಚಿತ್ರದುರ್ಗ.ಜೂ.೧೮: ಇದೇ ಜೂನ್ 21ರಂದು ನಡೆಯಲಿರುವ 9ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಪ್ರಾರಂಭವಾದ ಯೋಗ ನಡಿಗೆ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಜಿಲ್ಲಾ ಆಯುಷ್ ಅಧಿಕಾರಿ ಡಾ. ಜಗದೀಶ್, ಯೋಗ ಮತ್ತು ಪ್ರಕೃತಿ ಚಿಕಿತ್ಸೆ ವೈದ್ಯಾಧಿಕಾರಿ ಡಾ.ಗಂಗಾಧರ್ ವರ್ಮ, ಆಯುಷ್ ವೈದ್ಯಾಧಿಕಾರಿ ಡಾ.ಶಿವಕುಮಾರ್ ಅವರು ಹಸಿರು ನಿಶಾನೆ ತೋರುವ ಮೂಲಕ ಯೋಗ ನಡಿಗೆ ಜಾಥಾಕ್ಕೆ ಚಾಲನೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಯೋಗ ನಡಿಗೆ ಜಾಥಾವು ಗಮನ ಸೆಳೆಯಿತು. ಯೋಗ ನಡಿಗೆಯಲ್ಲಿ ವಿವಿಧ ಯೋಗ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಯೋಗಾಸಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಯೋಗ ನಡಿಗೆ ಉದ್ದೇಶಿಸಿ ಮಾತನಾಡಿದ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ವೈದ್ಯಾಧಿಕಾರಿ ಡಾ.ಗಂಗಾಧರ್ ವರ್ಮ, “ಯೋಗವು ಕೇವಲ ರೋಗ ಮುಕ್ತಿಗಾಗಿ ಅಷ್ಟೇ ಅಲ್ಲ ಮಾನಸಿಕ ಶಾಂತಿಗಾಗಿ ಅತ್ಯವಶ್ಯಕ” ಎಂದು ತಿಳಿಸಿದರು. ಆಯುಷ್ ವೈದ್ಯಾಧಿಕಾರಿ ಡಾ.ಶಿವಕುಮಾರ್ ಮಾತನಾಡಿ, ಇದೇ ಜೂನ್ 21ರಂದು ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಹಮ್ಮಿಕೊಂಡಿದ್ದು, ಎಲ್ಲ ಯೋಗಾಸಕ್ತರು, ಸಾರ್ವಜನಿಕರು ಅಂದು ಮುಂಜಾನೆ 6:30ಕ್ಕೆ ಸರಿಯಾಗಿ ಚಿತ್ರದುರ್ಗ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣಕ್ಕೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕೋರಿದರು. ಈ ಬಾರಿಯ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಘೋಷ ವಾಕ್ಯ ವಸುದೈವಕುಟುಂಬಕ್ಕಾಗಿ ಯೋಗ, ಅಂದರೆ ಪ್ರಪಂಚದ ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರು ಎಂಬ ಭಾವನೆ ಮೂಡಿ ವಿಶ್ವಶಾಂತಿ ನೆಲೆಸಲು ಯೋಗವೇ ಸಹಕಾರಿ ಇಂತಹ ಯೋಗವನ್ನು ಪ್ರತಿ ಮನೆಯ ಅಂಗಳಕ್ಕೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು. ಜಿಲ್ಲಾ ಆಯುಷ್ ಅಧಿಕಾರಿ ಡಾ. ಜಗದೀಶ್ ಮಾತನಾಡಿ, ಯೋಗ ನಡಿಗೆಯನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಎಲ್ಲಾ ಯೋಗ ಸಂಸ್ಥೆ ಯೋಗ ಬಂಧುಗಳು, ಸಾರ್ವಜನಿಕರಿಗೆ ಹೃತ್ಫೂರ್ವಕವಾಗಿ ವಂದನೆ ಸಲ್ಲಿಸಿದರು.ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿಯಿಂದ ಪ್ರಾರಂಭವಾದ ಯೋಗ ನಡಿಗೆ ಜಾಗೃತಿ ಜಾಥಾವು ಮದಕರಿ ಸರ್ಕಲ್, ರಂಗಯ್ಯನ ಬಾಗಿಲು, ಉಚ್ಚಂಗಮ್ಮನ ದೇವಸ್ಥಾನ ಬಾಗಿಲು ಮುಖಾಂತರ ಹಾದು ಗಾಂಧಿ ವೃತ್ತ ಹಾಗೂ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಸಮಾರೋಪಗೊಂಡಿತು. ಯೋಗ ನಡಿಗೆಯಲ್ಲಿ ಪತಂಜಲಿ ಯೋಗ ಸಂಸ್ಥೆ, ಯೋಗ ಕ್ರೀಡಾ ಸಂಸ್ಥೆ, ಶ್ರೀ ಪತಂಜಲಿ ಯೋಗ ಸಂಸ್ಥೆ, ಪ್ರಜಾಪಿತ ಬ್ರಹ್ಮಕುಮಾರಿ ವಿದ್ಯಾಲಯ, ಮಹಿಳಾ ಸೇವಾ ಸಮಾಜ, ಆರ್ಟ್ ಆಫ್ ಲಿವಿಂಗ್ ಯೋಗ ಸಂಸ್ಥೆ, ಭಾರತೀಯ ಯೋಗ ಶಿಕ್ಷಣ ಸಂಸ್ಥೆ, ರಾಷ್ಟ್ರೀಯ ಯೋಗ ಶಿಕ್ಷಣ ಸಂಸ್ಥೆ, ಶ್ರೀ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ ಯೋಗ ಶಿಕ್ಷಣ ಸಂಸ್ಥೆ, ಚಿನ್ಮಯ ಮಯೂರ ಯೋಗ ಕ್ರೀಡಾ ಸಂಸ್ಥೆ, ರೋಟರಿ ಕ್ಲಬ್, ರಾಜ್ಯ ಸರ್ಕಾರಿ ನೌಕರರ ಸಂಘ, ಅಮೃತ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಸದಸ್ಯರು, ಜಿಲ್ಲಾ ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.