ಚಿತ್ರದುರ್ಗ ಕೋಟ್ಪಾ-2003ರ ಕಾಯ್ದೆಯ ಉನ್ನತ ಅನುಷ್ಠಾನ ಜಿಲ್ಲೆ

ಚಿತ್ರದುರ್ಗ,ಜೂ.3; ಚಿತ್ರದುರ್ಗ ಜಿಲ್ಲೆಯನ್ನು ಕೋಟ್ಪಾ-2003ರ ಕಾಯ್ದೆಯ ಉನ್ನತ ಅನುಷ್ಠಾನ ಜಿಲ್ಲೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಘೋಷಿಸಿದ್ದಾರೆ.
 2021-22ನೇ ಸಾಲಿನಲ್ಲಿ ವಿಶ್ವ ತಂಬಾಕು ರಹಿತ ದಿನ 2021ರ ಮೇ 31ರಂದು  ಈ ವರ್ಷದ ಘೋಷ ವಾಕ್ಯ “ತ್ಯಜಿಸಲು ಬದ್ಧರಾಗಿ” ಎಂದು ಸಾರ್ವಜನಿಕರಿಗೆ ತಿಳಿಸುತ್ತಾ ವಿಶ್ವ ತಂಬಾಕು ರಹಿತ ದಿನ ಮೇ 31ರಂದು ಚಿತ್ರದುರ್ಗ ಜಿಲ್ಲೆಯನ್ನು ಕೋಟ್ಪಾ-2003ರ ಕಾಯ್ದೆಯ ಉನ್ನತ ಅನುಷ್ಠಾನ ಜಿಲ್ಲೆ ಎಂದು ಜಿಲ್ಲಾಧಿಕಾರಿಗಳು ಘೋಷಿಸಿದ್ದಾರೆ
 ರಾಜ್ಯ ತಂಬಾಕು ನಿಯಂತ್ರಣ ಕೋಶ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಸಹಯೋಗದೊಂದಿಗೆ 2018-19 ನೇ ಸಾಲಿನಿಂದ ಜಿಲ್ಲೆಯನ್ನು ಕೋಟ್ಪಾ-2003 ರ ಕಾಯ್ದೆಯ ಉನ್ನತ ಅನುಷ್ಠಾನ ಜಿಲ್ಲೆಯನ್ನಾಗಿ ಮಾಡುವುದಾಗಿ ಗುರಿಯನ್ನು ಇಟ್ಟುಕೊಂಡು ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ಪೋಲಿಸ್, ನಗರಸಭೆ, ಆರೋಗ್ಯ, ಶಿಕ್ಷಣ, ಅಬಕಾರಿ ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಕೋಟ್ಪಾ-2003ರ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ, ಸಾಮಥ್ರ್ಯಾಭಿವೃದ್ಧಿ ಹಾಗೂ ಮೇಲ್ವಿಚಾರಣೆ ಕುರಿತು ತರಬೇತಿಗಳನ್ನು ಕೈಗೊಳ್ಳಲಾಗಿದೆ.
  ಪ್ರತಿ 3 ತಿಂಗಳಿಗೊಮ್ಮೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸದಸ್ಯರುಗಳಿಗೆ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ.
  ಜಿಲ್ಲೆಯ ನಗರ ಹಾಗೂ ತಾಲ್ಲೂಕು ಮಟ್ಟದಲ್ಲಿ ಕಂದಾಯ, ಆರೋಗ್ಯ, ಪೋಲಿಸ್, ಅಬಕಾರಿ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ನಗರಾಭಿವೃದ್ಧಿ ಇಲಾಖೆಗಳ ಸಹಕಾರದೊಂದಿಗೆ ತಂಬಾಕು ದಾಳಿಗಳನ್ನು ಕೈಗೊಂಡು 2018 ರಿಂದ 2021ರವರೆಗೆ 3836 ಪ್ರಕರಣಗಳು ಹಾಗೂ ರೂ. 3,45,524/- ದಂಡ ವಸೂಲಾಗಿರುತ್ತದೆ.
 ದಾಳಿ ಕೈಗೊಂಡ ಚಿತ್ರದುರ್ಗ ಜಿಲ್ಲೆಯ ತಾಲ್ಲೂಕು & ಪ್ರಮುಖ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಸಮೀಕ್ಷೆ ಕೈಗೊಳ್ಳಲು ಸಮುದಾಯ ಆರೋಗ್ಯ ವಿಭಾಗ, ಸುಬ್ಬಯ್ಯ ಮೆಡಿಕಲ್ ಕಾಲೇಜ್, ಶಿವಮೊಗ್ಗ ಇವರಿಗೆ ನೀಡಿರುತ್ತಾರೆ. ಅದರಂತೆ ಜಿಲ್ಲೆಯಲ್ಲಿ ಕೋಟ್ಪಾ-2003 ಕಾಯ್ದೆಯ ಸೆಕ್ಷನ್-4, 5, 6ಎ, 6ಬಿ ಮತ್ತು 7 ರ ಅಡಿಯಲ್ಲಿ ಸಮೀಕ್ಷೆ ಕೈಗೊಂಡು ಜಿಲ್ಲೆಯನ್ನು ಕೋಟ್ಪಾ-2003 ರ ಕಾಯ್ದೆ ಅಡಿಯಲ್ಲಿ ಶೇಕಡಾ 90 ರಷ್ಟು ಉನ್ನತ ಅನುಷ್ಠಾನ ಹೊಂದಿದ್ದು ಮತ್ತು ಜಿಲ್ಲೆಯಾದ್ಯಂತ ಸೆಕ್ಷನ್-4, 6ಬಿ ಹಾಗೂ 7 ರ ಅಡಿಯಲ್ಲಿ ಉನ್ನತ ಅನುಷ್ಠಾನ ಹೊಂದಿರುತ್ತದೆಂದು ಸಮೀಕ್ಷೆಯ ವರದಿಯನ್ನು ರಾಜ್ಯ ತಂಬಾಕು ನಿಯಂತ್ರಣ ಘಟಕಕ್ಕೆ ಸಲ್ಲಿಸಿರುತ್ತಾರೆ.
 ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಫಾಲಾಕ್ಷ, ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ.ರಂಗನಾಥ್, ಜಿಲ್ಲಾ ಸಲಹೆಗಾರ ಬಿ.ಎಂ.ಪ್ರಭುದೇವ್, ಸಮಾಜ ಕಾರ್ಯಕರ್ತ ಕೆ.ಎಂ.ತಿಪ್ಪೇಸ್ವಾಮಿ ಭಾಗವಹಿಸಿದ್ದರು.