
ಚಿತ್ರದುರ್ಗ, ಮೇ.4: ಇಲ್ಲಿನ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಹೆಚ್.ತಿಪ್ಪಾರೆಡ್ಡಿ, ಜೆಡಿಎಸ್ ಅಭ್ಯರ್ಥಿ ರಘು ಆಚಾರ್ ಹಾಗೂ ಪಕ್ಷೇತರ ಅಭ್ಯರ್ಥಿ ಸೌಭಾಗ್ಯ ಬಸವರಾಜನ್ ಅವರು ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಭಯದಿಂದ ಕಾಂಗ್ರೇಸ್ ಆಭ್ಯರ್ಥಿ ಕೆ.ಸಿ.ವಿರೇಂದ್ರಪಪ್ಪಿ ವಿರುದ್ಧ ಜಾಲತಾಣಗಳಲ್ಲಿ ಅಪ ಪ್ರಚಾರ ಮಾಡುತ್ತಿದ್ದು, ಈ ಕುರಿತು ನ್ಯಾಯಾಲಯವು ತಡೆಯಾಜ್ಞೆ ನೀಡಿದೆ ಎಂದು ವಿರೇಂದ್ರಪಪ್ಪಿ ಪರ ವಕೀಲರಾದ ಆಶ್ವಿಜ್ ಪಾಟೇಲ್ ಹೇಳಿದರು. ನಗರದ ಪತ್ರಿಕಾಭವನದಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಕೆ.ಸಿ.ವಿರೇಂದ್ ಪಪ್ಪಿ ಅವರು ಕಣದಲ್ಲಿರುವುದರಿಂದ ಜಿ.ಹೆಚ್.ತಿಪ್ಪಾರೆಡ್ಡಿ, ರಘು ಆಚಾರ್ ಹಾಗೂ ಸೌಭಾಗ್ಯ ಬಸವರಾಜನ್ ಅವರಿಗೆ ಸೋಲಿನ ಭಯ ಕಾಡುತ್ತಿದೆ. ಇದರಿಂದ ವಿಚಲಿತರಾಗಿರುವ ಇವರುಗಳು ಯಾವುದೇ ಅಕ್ರಮಗಳನ್ನು ಎಸಗದೆ ಇರುವ ವಿರೇಂದ್ರ ಪಪ್ಪಿ ಅವರ ಮೇಲೆ ಜಾಲತಾಣಗಳ ಮೂಲಕ ಸುಳ್ಳು ಆರೋಪಗಳನ್ನು ಮಾಡುತ್ತಾ ಜನರಿಗೆ ತಪ್ಪು ಸಂದೇಶವನ್ನು ನೀಡುತ್ತಿದ್ದಾರೆ ಎಂದು ದೂರಿದರು.ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರ ಬೆಂಬಲಿಗ ಶಶಿಕುಮಾರ್ ಅವರು ಪ್ರತ್ಯೇಕ ಫೇಸ್ ಬುಕ್ ಬಳಸಿ ವಿರೇಂದ್ರಪಪ್ಪಿ ಅವರು ಚಿತ್ರದುರ್ಗದಲ್ಲಿ ಕ್ಯಾಸಿನೋ ತೆರೆಯುತ್ತಾರೆ. ಇಲ್ಲಿನ ಜನರು ಜೂಜಾಟ ಆಡುವಂತೆ ಮಾಡುತ್ತಾರೆ ಎಂದು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದರು. ಇವರುಗಳ ವಿರುದ್ದ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿದಾಗ ನ್ಯಾಯಾಲಯವು ಶಶಿಕುಮಾರ್, ಜಿ.ಹೆಚ್.ತಿಪ್ಪಾರೆಡ್ಡಿ, ರಘು ಆಚಾರ್ ಹಾಗೂ ಸೌಭಾಗ್ಯ ಬಸವರಾಜನ್ ಅವರುಗಳು ವಿರೇಂದ್ರಪಪ್ಪಿ ವಿರುದ್ಧ ಯಾವುದೇ ಜಾಲತಾಣಗಳಲ್ಲಿ ಪೋಸ್ಟರ್, ವಿಡಿಯೋಗಳನ್ನು ಹಾಕಿ ಅಪಪ್ರಚಾರ, ಮಾನಹಾನಿ ಮಾಡದಂತೆ ತಡೆಯಾಜ್ಞೆಯನ್ನು ನೀಡಿದೆ. ಈ ತಡೆಯಾಜ್ಞೆ ಆದೇಶವು ದಿನಾಂಕ 9-6-2023 ರ ವರೆಗೆ ಜಾರಿ ಇರುತ್ತದೆ ಎಂದು ತಿಳಿಸಿದರು.ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಮಂಜಪ್ಪ ಮಾತನಾಡಿ, ಜಿ.ಹೆಚ್. ತಿಪ್ಪಾರೆಡ್ಡಿ ಅವರು 6 ಭಾರೀ ಶಾಸಕರಾಗಿದ್ದರೂ ಕೂಡ ಚಿತ್ರದುರ್ಗ ತಾಲ್ಲೂಕು ಯಾವುದೇ ಅಭಿವೃದ್ಧಿ ಮಾಡಿಲ್ಲ. ಇಲ್ಲಿನ ಜನರಲ್ಲಿ ಹೊಡೆದಾಟ ಮಾಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇವರ ಜೊತೆ ಸುಮಾರು ವರ್ಷಗಳ ಕಾಲ ಇದ್ದವರು ಕೂಡ ಸಾಕಷ್ಟು ಅಪಮಾನ ಅನುಭವಿಸಿ ಈಗ ಅವರನ್ನು ಬಿಟ್ಟು ಕಾಂಗ್ರೇಸ್ ಸೇರಿದರೆ ಅವರ ಮೇಲೆ ಹಲ್ಲೆ ಮಾಡಿ ಎಂದು ಹೇಳುವ ತಿಪ್ಪಾರೆಡ್ಡಿ ಒಬ್ಬ ರಾಜಕಾರಣಿಯೇ ಎಂದು ಪ್ರಶ್ನಿಸಿದರು.ಪತ್ರಿಕಾಗೋಷ್ಠಿಯಲ್ಲಿ ಹೆಚ್.ಎನ್.ಮಂಜುನಾಥ್, ಶ್ರೀಧರ್ ಹಾಜರಿದ್ದರು.