ಚಿತ್ರದುರ್ಗದ 100 ಗ್ರಾ.ಪಂಗಳಲ್ಲಿ ಶಾಂತಿಯುತ ಮತದಾನ

ಚಿತ್ರದುರ್ಗ.ಡಿ.೨೨:  ರಾಜ್ಯದಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಸಂಬಂಧ ಮೊದಲ ಹಂತದಲ್ಲಿ ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ, ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲ್ಲೂಕಿನ 100 ಗ್ರಾಮ ಪಂಚಾಯಿತಿಗಳ 1588 ಸದಸ್ಯ ಸ್ಥಾನಗಳಿಗೆ ಇಂದು ಮತದಾನ ನಡೆದಿದ್ದು, ಮಧ್ಯಾಹ್ನ 1 ಗಂಟೆಯ ವೇಳೆಗೆ ಶೇಕಡ 39% ರಷ್ಟು ಮತದಾನ ನಡೆದಿದೆ.ಇಂದು ಬೆಳಿಗ್ಗೆ 7 ರಿಂದ ಪ್ರಾರಂಭಗೊಂಡ ಮತದಾನ ಪ್ರಕ್ರಿಯೇ ಮಂದಗತಿಯಲ್ಲಿ ನಡೆಯಿತಾದರೂ 12 ಗಂಟೆಯ ಬಳಿಕಾ ಚುರುಕುಗೊಂಡಿತು. ಚಿತ್ರದುರ್ಗ ಶೇಕಡ 29.90%, ಹೊಸದುರ್ಗ ಶೇಕಡ 28.86%, ಹೊಳಲ್ಕೆರೆ ಶೇಕಡ 32.25%ಒಟ್ಟಾರೆ ಮೂರು ತಾಲ್ಲೂಕಿನಿಂದ ಶೇಕಡ 39% ಮತದಾನ ನಡೆದಿದೆ.ಮಠಾಧೀಶರಿಂದ ಮತದಾನ: ಚಿತ್ರದುರ್ಗ ತಾಲ್ಲೂಕಿನ ಮಠದ ಕುರುಬರಹಟ್ಟಿ ಪಂಚಾಯತಿ ಮತಗಟ್ಟೆಯಲ್ಲಿ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾಶರಣರು ಬೆಳಗ್ಗೆ 8.30 ಸುಮಾರಿನಲ್ಲಿ ಮತದಾನ ಮಾಡಿದರು‌. ನಂತರ ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ.ಶ್ರೀ ಶಾಂತವೀರ ಮಹಾಸ್ವಾಮೀಜಿ, ಭೋವಿಗುರುಪೀಠ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ, ಮಾದರಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದರಚನ್ನಯ್ಯ ಮಹಾಸ್ವಾಮೀಜಿ, ಮಡಿವಾಳ ಗುರುಪೀಠದ ಶ್ರೀ ಬಸವ ಮಾಚಿದೇವ ಮಹಾಸ್ವಾಮೀಜಿ ಶ್ರೀ ಬಸವ ಹರಳಯ್ಯ ಮಹಾಸ್ವಾಮೀಜಿ ಅವರುಗಳು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.ಮಾತಿನ ಚಕಮಕಿ : ಆಯಿತೋಳು ಪಂಚಾಯತಿಯ 133 ಹಾಗೂ 134 ಮತಗಟ್ಟೆಯಲ್ಲಿ ನಡೆಯಲು ಆಗದಂತಹ ಅಜ್ಜಿಯನ್ನು ಮತಗಟ್ಟೆಗೆ ಕರೆದೊಯ್ಯುವ ಸಂಬಂಧ 2 ಗುಂಪುಗಳ ನಡುವೆ ಪರಸ್ಪರ ಮಾತಿನ ಚಕಮಕಿ ನಡೆಯಿತು. ಇದನ್ನು ಹೊರತು ಪಡಿಸಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದೆ ಮತದಾನ ಪ್ರಕ್ರಿಯೆ ಸರಾಗವಾಗಿ ನಡೆದಿದೆ.ಮೊದಲ ಹಂತದ ಇಂದಿನ ಚುನಾವಣೆಯಲ್ಲಿ 810 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು,, ಎಲ್ಲ ಮತಗಟ್ಟೆಗಳಲ್ಲಿ ಕೋವಿಡ್-19 ಮಾರ್ಗಸೂಚಿಯಂತೆ ಮುನ್ನಚ್ಚರಿಕೆ ವಹಿಸಲಾಗಿತ್ತು, ಚಿತ್ರದುರ್ಗ ತಾಲ್ಲೂಕಿನಲ್ಲಿ 324, ಹೊಸದುರ್ಗ 247 ಹಾಗೂ ಹೊಳಲ್ಕೆರೆ 239 ಮತಗಟ್ಟೆಗಳು ಸೇರಿದಂತೆ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಒಟ್ಟು 810 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಚಿತ್ರದುರ್ಗ 64, ಹೊಳಲ್ಕೆರೆ 45 ಹಾಗೂ ಹೊಸದುರ್ಗದಲ್ಲಿ 49 ಸೇರಿದಂತೆ ಒಟ್ಟು 158 ಸೂಕ್ಷ್ಮ ಮತಗಟ್ಟೆಗಳು, ಚಿತ್ರದುರ್ಗ 260, ಹೊಳಲ್ಕೆರೆ 194 ಹಾಗೂ ಹೊಸದುರ್ಗ 198 ಸೇರಿದಂತೆ ಒಟ್ಟು 652 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜೊತೆಗೆ ಬಂದೋಬಸ್ತ್ ವ್ಯವಸ್ಥೆಯನ್ನು ಕೈಗೊಳ್ಳಲಾಗಿದ್ದು, ಮತಗಟ್ಟೆಗಳಿಗೆ ಅಗತ್ಯ ಮೂಲಸೌಲಭ್ಯವನ್ನು ಕಲ್ಪಿಸಲಾಗಿತ್ತು.ಚುನಾವಣೆ ಸಂಬಂಧ ಮಾದರಿ ನೀತಿ ಸಂಹಿತೆ ತಂಡವನ್ನು ರಚನೆ ಮಾಡಲಾಗಿದ್ದು, ಜಿಲ್ಲಾಮಟ್ಟದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಮಟ್ಟದಲ್ಲಿ ಆಯಾ ತಾಲ್ಲೂಕಿನ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನೊಳಗೊಂಡ ತಂಡವನ್ನು ರಚನೆ ಮಾಡಲಾಗಿತ್ತು. 53 ಸೆಕ್ಟರ್ ಅಧಿಕಾರಿಗಳ ನೇಮಕ: ಮೊದಲ ಹಂತದ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಸಂಬಂಧ ಚಿತ್ರದುರ್ಗ 18, ಹೊಸದುರ್ಗ 17 ಹಾಗೂ ಹೊಳಲ್ಕೆರೆ 18 ಸೇರಿದಂತೆ ಒಟ್ಟು 53 ಮಂದಿಯನ್ನು ಸೆಕ್ಟರ್ ಅಧಿಕಾರಿಗಳ ನೇಮಕ ಮಾಡಲಾಗಿತ್ತು.ಅಭ್ಯರ್ಥಿಗಳು ಅವಿರೋಧ ಆಯ್ಕೆ: ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ-2020ರ ಸಂಬಂಧ ಮೊದಲ ಹಂತದಲ್ಲಿ ಜಿಲ್ಲೆಯ ಚಿತ್ರದುರ್ಗ, ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲ್ಲೂಕುಗಳ 100 ಗ್ರಾಮಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣೆಗೆ ಮುನ್ನವೇ 158 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.