ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಸಾಂಸ್ಕೃತಿಕ ಉತ್ಸವ

 ಚಿತ್ರದುರ್ಗ.ಜುಲೈ.24- ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನ ನೂತನ ಕಟ್ಟಡದಲ್ಲಿ ಸಾಂಸ್ಕೃತಿಕ ಉತ್ಸವ, ಅಪ್ಪುಗೆ, ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ. ಹೆಚ್ ಗೋಪಾಲಪ್ಪ ನವರು  ಕರೋನ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳ ಕಾಲ ಕಾಲೇಜಿನಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿರಲಿಲ್ಲ, ಈ ವರ್ಷ ವಿದ್ಯಾರ್ಥಿಗಳ  ಒತ್ತಾಯದ ಮೇರೆಗೆ  ಕಾರ್ಯಕ್ರಮ ಆಯೋಜಿಸಲಾಗಿದ್ದು ಸಂತೋಷಕರ ಎಂದರು. ಕಾಲೇಜಿನಲ್ಲಿ ನೂತನ ಆಡಿಟೋರಿಯಂ, ಅಂಚೆ ಇಲಾಖೆ, ಜೆರಾಕ್ಸ್ ಅಂಗಡಿ ಆರಂಭಿಸಲಾಗಿದೆ  ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಂಡು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು ಎಂದು ಹೇಳಿದರು. ನಮ್ಮ ಕಾಲೇಜಿನಲ್ಲಿ ಬಿ ಎಸ್ ಸಿ,ಪಿ ಸಿ ಎಂ ಮತ್ತುಎಂ ಎಸ್ ಸಿ ರಾಸಾಯನಶಾಸ್ತ್ರ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ನನ್ನ ಸ್ವಂತ ಹಣ ಎರಡು ಲಕ್ಷ ರೂಪಾಯಿಗಳನ್ನು ಅಂಚೆ ಕಚೇರಿಯಲ್ಲಿ ಠೇವಣಿ ಮಾಡಿರುತ್ತೇನೆ ಎಂದು ಹೇಳಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಎನ್ ಬಿ ಗಟ್ಟಿ ಇವರು ಮಾತನಾಡಿ ನಮ್ಮ ನೂತನ ಕಟ್ಟಡಕ್ಕೆ ಮಾಜಿ ಸಚಿವರಾದ ಹೆಚ್. ಆಂಜನೇಯ ರವರು ಸಚಿವರಾಗಿದ್ದ ಸಂದರ್ಭದಲ್ಲಿ ಇದೇ ಕಾಲೇಜಿನ ಪ್ರಾಧ್ಯಾಪಕರು ಹಾಗೂ  ಐಕ್ಯೂಎಸಿ ಕೋಆರ್ಡಿನೇಟರ್ ಆಗಿದ್ದ ದಿವಂಗತ ಡಾ.ಕೆ.ಕೆ.ಕಮಾನಿಯವರ ಮನವಿ ಮೇರೆಗೆ ಹನ್ನೊಂದು ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು ಅವರಿಬ್ಬರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದು ಹೇಳಿದರು. ಕೇಂದ್ರ ಸಚಿವರಾದ ಎ. ನಾರಾಯಣಸ್ವಾಮಿ ಅವರು ಮತ್ತು ಚಿತ್ರದುರ್ಗದ ಶಾಸಕರಾದ ಜಿ ಎಚ್ ತಿಪ್ಪಾರೆಡ್ಡಿ ಅವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಕೆ ಎಸ್ ನವೀನ್ ರವರು ನಮ್ಮ ಕಾಲೇಜಿಗೆ ನೂತನ ಕಾಂಪೌಂಡ್ ರಸ್ತೆ ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಟ್ಟಿರುತ್ತಾರೆ ಅವರಿಗೆ ನಮ್ಮ ಧನ್ಯವಾದಗಳು ಎಂದರು. ಇಂತಹ ಗಣ್ಯರಿಂದ ಸುಸಜ್ಜಿತವಾಗಿ ನಿರ್ಮಾಣವಾಗಿರುವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಆಸಕ್ತಿವಹಿಸಿ ಉತ್ತಮ ಶಿಕ್ಷಣ ಪಡೆಯುವ ಮೂಲಕ ಈ ದೇಶದ ಸತ್ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ  ಪ್ರಾಧ್ಯಾಪಕರಾದ ಡಾ.ಎ ಬಿ ಸತೀಶ್ , ಡಾ.ನಾಗವೇಣಿ, ಸಾಂಸ್ಕೃತಿಕ ಕಾರ್ಯದರ್ಶಿ ನಾಗರಾಜ್ ಮತ್ತು ಕಾಲೇಜಿನ ಪ್ರಾಧ್ಯಾಪಕರು ಮತ್ತು ಸಿಬ್ಬಂದಿ ವರ್ಗದವರು ಹಾಗು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು 2018 -19 ರಿಂದ 2020 -21ನೇ ಸಾಲಿನವರೆಗೆ ಮೂರು ವರ್ಷದ ಅವಧಿಯಲ್ಲಿ  ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಂತರ ವಿದ್ಯಾರ್ಥಿಗಳಿಂದ ಮನಮೋಹಕವಾದ  ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.