ಚಿತ್ರದುರ್ಗದ ಕಲುಷಿತ ನೀರಿನ ಪ್ರಕರಣ ಸಿಬಿಐಗೆ ಒಪ್ಪಿಸಲು  ಆಗ್ರಹ 

ಸಂಜೆವಾಣಿ ವಾರ್ತೆ

ಜಗಳೂರು.ಆ.೧೦:ತಾಲೂಕಿನ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ತಾಲೂಕು ಕಚೇರಿಯವರೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಚಿತ್ರದುರ್ಗ ಜಿಲ್ಲೆಯ ಕವಾಡಿಗರಹಟ್ಟಿಯಲ್ಲಿ ದಲಿತ ಕೇರಿಗೆ ಕುಡಿಯುವ ನೀರಿಗೆ ವಿಷ ಹಾಕಿರುವ ಘಟನೆ ಮತ್ತು ಜಿಲ್ಲೆಯ ಅಡವಿ ರಾಮಜೋಗಿಹಳ್ಳಿಯಲ್ಲಿ ಅಂಬೇಡ್ಕರ್ ನಾಮಫಲಕವನ್ನು ವಿರೋಧಿಸಿ ಸವರ್ಣೀಯವರಿಂದ ದಲಿತರ ಮೇಲೆ ಹಲ್ಲೆ ಖಂಡಿಸಿ  ಹೋರಾಟವನ್ನು ಮಾಡುವುದರ ಮೂಲಕ ಜಗಳೂರು ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ದ.ಸಂ.ಸ ತಾಲೂಕು ಘಟಕದ ಅಧ್ಯಕ್ಷರಾದ ಸತೀಶ್.ಬಿ ಮಲೆಮಾಚಿಕೆರೆ ಮಾತನಾಡಿ, ಚಿತ್ರದುರ್ಗ ಜಿಲ್ಲೆಯ ನಗರಸಭೆ ವ್ಯಾಪ್ತಿಯ ಕಾವಾಡಿಗರಹಟ್ಟಿ 17ನೇ ವಾರ್ಡಿನಲ್ಲಿ ಕಲುಷಿತ ವಿಷಪೂರಿತ ನೀರನ್ನು ನಗರಸಭೆಯವರು ಪೂರೈಸಿದ ಹಿನ್ನೆಲೆಯಲ್ಲಿ ಆ ನೀರನ್ನು ಕುಡಿದು ಗರ್ಭದಲ್ಲಿ ಇರುವ ಮಗು ಸೇರಿದಂತೆ ಏಳು ಜನ ಸಾವನ್ನಪ್ಪಿದ್ದು, ಸುಮಾರು 200 ಜನ ಅನಾರೋಗ್ಯ ಪೀಡಿತರಾಗಿದ್ದು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ 80 ಜನ ಚಿಕಿತ್ಸೆ ಪಡೆಯುತ್ತಿದ್ದು, ಅದರಲ್ಲಿ 22ಜನ ಮಕ್ಕಳು ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾವಡಿಗರಹಟ್ಟಿಯಲ್ಲಿ ಪರಿಶಿಷ್ಟರು ಹಾಗೂ ಮೇಲ್ವರ್ಗದ ಸವರ್ಣೀಯರ ಘರ್ಷಣೆಯ ವೈಶಮ್ಯವೇ ಈ ಘಟನೆಗೆ ಕಾರಣವಾಗಿದೆ. ಕುಡಿಯುವ ನೀರಿನ ಕೊಳಾಯಿ ಮೂಲಕ ನೀರಿಗೆ ವಿಷ ಬೆರೆಸಿ ಪೂರೈಸಿರುವ ಬಗ್ಗೆ ಅನುಮಾನವಿದೆ. ಆದರೆ ತನಿಖೆ ಮಾಡಬೇಕಾದ ಜಿಲ್ಲಾಡಳಿತವು ಮೇಲ್ನೋಟಕ್ಕೆ ‘ಕಾಲರಾ’ ಇರಬಹುದೆಂದು ತಿಳಿಸಿದೆ. ಈ ಘಟನೆಯಲ್ಲಿ ಸಾವನಪ್ಪಿದ ಏಳು ಜನರ ಮೃತರ ಕುಟುಂಬಕ್ಕೆ ತಲಾ 50 ಲಕ್ಷ ರೂ.ಗಳು ಪರಿಹಾರ ನೀಡಬೇಕು. ಅದಲ್ಲದೆ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡಬೇಕು ಹಾಗೂ 25 ಲಕ್ಷ ರೂ.ಗಳ ವೆಚ್ಚದಲ್ಲಿ ಮನೆಯನ್ನು ನಿರ್ಮಿಸಿಕೊಡಬೇಕು. ಕಾವಾಡಿಗರಹಟ್ಟಿಯಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತೆರೆಯಬೇಕು. ಹೊಸದಾಗಿ ಬೋರ್ವೆಲ್ ಕೊರೆಯಿಸಿ ದಲಿತ ಕೇರಿಗೆ ನೀರು ಹರಿಸಬೇಕು ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಸಂಘಟನಾ ಸಂಚಾಲಕರಾದ ಕ್ಯಾಸನಹಳ್ಳಿ ಹನುಮಂತಪ್ಪ, ಹಿರೇಮಲ್ಲನಹೊಳೆ ಉಮೇಶ್, ಸಾಗಲಗಟ್ಟೆ ತಿಮ್ಮಣ್ಣ, ರಾಜನಹಟ್ಟಿ ಚೌಡಪ್ಪ, ಸಣ್ಣ ನಾಗಪ್ಪ, ಪಲ್ಲಗಟ್ಟೆ ರವಿಚಂದ್ರ, ಸೂರೆಡ್ಡಿಹಳ್ಳಿ ರವಿ, ಅಸಗೋಡು ಪರಶುರಾಮ್, ದೇವಣ್ಣ ನಿಬಗೂರು, ಸಿ.ಎಂ.ಹೊಳೆ ಮಾರುತಿ, ಹಳುವದಂಡಿ ಕೋಟಿ, ಶಶಿ,  ಜಗಜೀವನ್ ರಾಮ್ ಆರ್.ಎಲ್, ವಿದ್ಯಾರ್ಥಿ ಘಟಕದ ಸಂಚಾಲಕರಾದ ಅಸಗೋಡು ಶಿವಕುಮಾರ್ ಎಸ್, ರಮೇಶ್ ವ್ಯಾಸಗೊಂಡನಹಳ್ಳಿ, ಸೂರ್ಯ.ಎಚ್ ಲಕ್ಕಂಪುರ, ಮೈಲಾರಸ್ವಾಮಿ, ರಾಜು, ಇನ್ನು ಅನೇಕರು ಭಾಗವಹಿಸಿದ್ದರು.