(ಸಂಜೆವಾಣಿ ವಾರ್ತೆ)
ಬಳ್ಳಾರಿ ಸೆ 24: ಸ್ಥಳೀಯ ಸರಳಾದೇವಿ ಕಾಲೇಜಿನಲ್ಲಿ ಪುನರುತ್ಥಾನ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾ ಘಟಕದಿಂದ ಇಂದು ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಚಿತ್ರದುರ್ಗದ ಇತಿಹಾಸಕಾರ ಮತ್ತು ಇತಿಹಾಸ ಅಕಾಡೆಮಿಯ ಸದಸ್ಯ ಡಾ. ಮಹಾಂತೇಶ, ಚಿತ್ರದುರ್ಗದ ಇತಿಹಾಸದ ಮೇಲೆ ಆಧಾರ ಗ್ರಂಥಗಳ ಮೂಲಕ ಬೆಳಕು ಚೆಲ್ಲಿದರು.
ಚಿತ್ರದುರ್ಗದ ಕೋಟೆ, ಮದಕರಿನಾಯಕರ, ಒನಕೆ ಓಬವ್ವಳ ಬಗ್ಗೆ ವಿವರವಾಗಿ ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಅಕಾಡೆಮಿಯ ಜಿಲ್ಲಾ ಅಧ್ಯಕ್ಷ ಟಿ.ಎಚ್.ಎಮ್ ಬಸವರಾಜ್, ಇತಿಹಾಸದ ಲಾವಣಿಯನ್ನು ಓದಿದರು, ಹಾಗೂ ಬಳ್ಳಾರಿ ಜಿಲ್ಲೆಯ ಇತಿಹಾಸ ಮತ್ತು ಏಕೀಕರಣದ ಬಗ್ಗೆ ತಿಳಿಸಿಕೊಟ್ಟರು.
ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ರೆಡ್ಡಿ, ಐತಿಹಾಸಿಕ ಪರಂಪರೆ ಉಳಿಸುವ ಬಗ್ಗೆ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿ, ಈಗಿನ ವಿದ್ಯಾರ್ಥಿಗಳಿಗೆ ಇತಿಹಾಸದ ಮಹತ್ವನ್ನು ತಿಳಿಸಬೇಕು. ಮುಂದಿನ ದಿನಗಳಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಇಂತಹ ವಿಚಾರ ಸಂಕಿರಣಗಳನ್ನು ಇತಿಹಾಸ ಅಕಾಡೆಮಿಯ ಸಹಕಾರದಲ್ಲಿ ಹಮ್ಮಿಕೊಳ್ಳುತ್ತೇವೆಂದರು.
ಪುನರುತ್ಥಾನ ಅಧ್ಯಯನ ಕೇಂದ್ರದ ಅಧ್ಯಕ್ಷ ಶ್ರೀನಾಥ ಜೋಷಿ ಪ್ರಾಸ್ತಾವಿಕ ನುಡಿಗಳನ್ನು ಆಡಿ ಎಲ್ಲರನ್ನೂ ಸ್ವಾಗತಿಸಿ, ವಂದಿಸಿದರು. ರೇಣುಕಾ ಅಭಿಲಾಷ್ ಪ್ರಾರ್ಥನೆ ಹಾಗೂ ಚಿತ್ರದುರ್ಗದ ಐತಿಹಾಸಿಕ ಗೀತೆಗಳನ್ನು ಹಾಡಿದರು. ವೇದಿಕೆಯ ಮೇಲೆ ನರಹರಿ ಪ್ರಸಾದ್ ಇದ್ದರು.