
ಕಲಬುರಗಿ:ಆ.14: ಚಿತ್ರದುರ್ಗದ ಕಾವಾಡಿಗರ ಹಟ್ಟಿಯಲ್ಲಿ ಪರಿಶಿಷ್ಟರ ಓಣಿಯಲ್ಲಿ ವಿಷಪೂರಿತ ನೀರು ಪೂರೈಕೆ ಹಿನ್ನೆಲೆಯಲ್ಲಿ ಆರೆಂಟು ಪರಿಶಿಷ್ಟ ಸಮುದಾಯದವರು ಮೃತಪಟ್ಟಿದ್ದು, ಸುಮಾರು 200 ಜನರು ಸಾವು, ನೋವು ಮಧ್ಯೆ ಹೋರಾಟ ಮಾಡುತ್ತಿದ್ದಾರೆ. ಇಡೀ ಘಟನೆಯ ಕುರಿತು ಸಮಗ್ರ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸೋಮವಾರ ಭೀಮಪುತ್ರಿ ಬ್ರಿಗೇಡ್ ಸಾಮಾಜಿಕ ಸಂಘಟನೆ ಜಿಲ್ಲಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಿದರು.
ಪ್ರತಿಭಟನೆಕಾರರು ನಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ಅದೇ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಅಡಿವಿರಾಮಜೋಗಿ ಗ್ರಾಮದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಫಲಕ ಹಾಕಿದ್ದರಿಂದ ಅದೇ ಗ್ರಾಮದ ಬಲಪಂಥೀಯರು ಸುಮಾರು 30 ಜನ ಪರಿಶಿಷ್ಟ ಸಮುದಾಯದವರಿಗೆ ಮಹಿಳೆಯರೂ ಎನ್ನದೇ ಹೊಡೆಬಡೆ ಮಾಡಿ ತೀವ್ರ ಗಾಯಗೊಳಿಸಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿದರು.
ದುರುದ್ದೇಶದಿಂದ ಈ ಎರಡೂ ಕೃತ್ಯಗಳು ಸಂಭವಿಸಿವೆ. ಮತೀಯತೆ ಎದ್ದು ಕಾಣುತ್ತಿದೆ. ವೈಯಕ್ತಿಕ ದ್ವೇಷಕ್ಕಾಗಿ ಮಾಡಲಾದ ಕೃತ್ಯ ಅಕ್ಷಮ್ಯ ಅಪರಾಧವಾಗಿದೆ. ಇಂತಹ ಘಟನೆಗಳು ನಾಗರಿಕ ಸಮಾಜ ತಲೆ ತಗ್ಗಿಸುವಂತಹವು ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಈ ಕುರಿತು ಘಟನೆಗಳ ಬಗ್ಗೆ ತ್ವರಿತ ತನಿಖೆ ಕೈಗೊಂಡು ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ಹಾಗೂ ಸಂತ್ರಸ್ತರಿಗೆ ಸೂಕ್ತ ಧನ ಸಹಾಯ ಒದಗಿಸುವಂತೆ ಅವರು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ರಾಜಕುಮಾರ್ ಹಾಗೂ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಭೀಮಪತ್ರಿ ಜಗದೇವಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಗುಲಾಮ್ ನಬಿ, ರಾಹುಲ್, ಸಾಯಬಣ್ಣ, ರಾಜೇಂದ್ರ, ಮೋಹಿನ್, ಶಾಂತಲಿಂಗ್, ಶ್ರೀಮತಿ ಶೋಭಾ, ಶ್ರೀಮತಿ ಸವಿತಾ, ಶ್ರೀಮತಿ ಲಕ್ಷ್ಮೀ ಮುಂತಾದವರು ಪಾಲ್ಗೊಂಡಿದ್ದರು.