ಚಿತ್ರದುರ್ಗದಲ್ಲಿ ಭಗೀರಥ ಜಯಂತಿ ಸರಳ ಆಚರಣೆ

ಚಿತ್ರದುರ್ಗ,ಮೇ.೧೯: ಕೋವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಲಾಕ್‍ಡೌನ್ ಜಾರಿಯಲ್ಲಿರುವ ಹಿನ್ನಲೆಯಲ್ಲಿ ಮಹರ್ಷಿ ಭಗೀರಥ ಜಯಂತಿಯನ್ನು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸರಳವಾಗಿ ಆಚರಿಸಲಾಯಿತು.
 ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ಭಗೀರಥ ಮಹರ್ಷಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
 ನಂತರ ಮಾತನಾಡಿದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಮನುಕುಲದ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ಭಗೀರಥರಂಥ ಮಹಾತ್ಮರ ಆದರ್ಶ ಮತ್ತು ತತ್ವಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ವಾರ್ತಾಧಿಕಾರಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಬಿ.ಧನಂಜಯ ಮಾತನಾಡಿ, ಉತ್ತಮ ಕಾರ್ಯಗಳಿಂದ ಜನರಿಗೆ ಒಳ್ಳೆಯದಾಗಬೇಕು. ಮಹರ್ಷಿ ಭಗೀರಥ ಅವರು ಕಠಿಣ ತಪಸ್ಸು ಮತ್ತು ಪರಿಶ್ರಮಕ್ಕೆ ಪ್ರಸಿದ್ಧರಾಗಿದ್ದಾರೆ. ಭೂಮಿಗೆ ಗಂಗೆಯನ್ನು ತರುವಲ್ಲಿ ಕಠೊರ ತಪಸ್ಸು ಮಾಡಿದ ಭಗೀರಥರು ಸವಾಲು ಮತ್ತು ಸಮಸ್ಯೆಗಳಿಗೆ ಎಂದಿಗೂ ಎದೆಗುಂದಲಿಲ್ಲ. ಸಮಾಜಕ್ಕೆ ಒಳಿತು ಮಾಡಲು ಪರಮಾತ್ಮನನ್ನು ಒಲಿಸಿಕೊಂಡರು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಫಾಲಾಕ್ಷ, ಜಿಲ್ಲಾ ಭಗೀರಥ ಸಮಾಜದ ಮುಖಂಡರಾದ ಮೂರ್ತಿ.ಆರ್, ನಿವೃತ್ತ ಡಿವೈಎಸ್‍ಪಿ ನಾಗರಾಜ ಉಪಸ್ಥಿತರಿದ್ದರು.