ಚಿತ್ರಗಳ ಮೂಲಕ ಬೋಧನೆ ಅವಶ್ಯ : ಕುಲಕರ್ಣಿ

????????????????????????????????????

ಬಾಗಲಕೋಟೆ: ಮಾ 26 : ವಿಜ್ಞಾನ ಮತ್ತು ಗಣಿತ ವಿಷಯಗಳು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತಿದ್ದು, ಇಂತಹ ವಿಷಯಗಳನ್ನು ಶಿಕ್ಷಕರು ಚಿತ್ರಗಳ ಮೂ¯ಕ ಬೋಧಿಸಿದಲ್ಲಿ ವಿದ್ಯಾರ್ಥಿಗಳಿಗೆ ಜ್ಞಾಪಕ ಶಕ್ತಿಯನ್ನು ವೃದ್ಧಿಸಿ ಅಧಿಕ ಅಂಕಗಳನ್ನು ಗಳಿಸಲು ಸಹಾಯಕಾರಿಯಾಗಲಿದೆ ಎಂದು ನಿವೃತ್ತ ವಿಜ್ಞಾನ ಶಿಕ್ಷಕ ಸುರೇಶ ಕುಲಕರ್ಣಿ ತಿಳಿಸಿದರು.
ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಬಾಗಲಕೋಟ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ “ಚಿತ್ರಗಳ ಮುಖಾಂತರ ವಿಜ್ಞಾನ ಮತ್ತು ಗಣಿತ” ಕಾರ್ಯಗಾರದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಬೋಧನೆ ಒಂದು ಕಲೆಯಾಗಿದ್ದು, ಮಕ್ಕಳಿಗೆ ವಿದ್ಯಾರ್ಜನೆ ನೀಡುವ ಕಲೆಯನ್ನು ಶಿಕ್ಷಕರು ಕರಗತ ಮಾಡಿಕೊಂಡು ಮಕ್ಕಳು ಶ್ರೇಯಾಭಿವೃದ್ಧಿ ಹೊಂದುವಂತೆ ಮಾಡಬೇಕೆಂದರು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಕುಲಸಚಿವರಾದ ಡಾ.ಟಿ.ಬಿ.ಅಳ್ಳೊಳ್ಳಿ ಅವರು ದಿನ ನಿತ್ಯದ ಜೀವನದಲ್ಲಿ ವೈಜ್ಞಾನಿಕ ವಿಧಾನಗಳನ್ನು ಬಳಸಿಕೊಂಡು ಮೂಡನಂಬಿಕೆಗಳನ್ನು ಹೋಗಲಾಡಿಸಬೇಕೆಂದರು. ಗಣಿತ ವಿಷಯ ತಜ್ಞರಾದ ಶ್ರೀಪಾದ ಕುಲಕರ್ಣಿ ಮಾತನಾಡಿ ನೂತನ ಗಣಿತ ಅನ್ವಯಗಳನ್ನು ವಾಣಿಜ್ಯಮಯವಾಗಿ ಬಳಸಿಕೊಳ್ಳುತ್ತಿರುವ ಕೈಗಾರಿಕಾ ಕ್ಷೇತ್ರದಲ್ಲಿ ಸದುಪಯೋಗಿಸಿ ಅಧಿಕ ಲಾಭ ಗಳಿಸುವ ತಂತ್ರಗಾರಿಕೆಯನ್ನು ರೂಡಿಸಿಕೊಳ್ಳಲು ತಿಳಿಸಿದರು.
ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರಾದ ಡಾ. ವೀರಣ್ಣ ಬೋಳಶೆಟ್ಟಿ ಅವರು ರೇಖಾಗಣಿತ ಚಿತ್ರಗಳ ಮುಖಾಂತರ ನೀಡಿದಲ್ಲಿ ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನ ಅಭಿವೃದ್ಧಿಯಾಗುತ್ತದೆ ಎಂದರು. ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ.ಮಲ್ಲಿಕಾ ಘಂಟಿ ಮಾತನಾಡಿ ವಿಜ್ಞಾನ ಮತ್ತು ಮೂಡನಂಬಿಕೆಗಳ ಕುರಿತು ಮಾತನಾಡಿದರು.
ಪ್ರಾಧ್ಯಾಪಕರು ಹಾಗೂ ಸದಸ್ಯರಾದ ಡಾ. ವಸಂತ ಗಾಣಿಗೇರ ಸರ್ವರನ್ನು ಸ್ವಾಗತಿಸಿ ವಿಜ್ಞಾನ ಕೇಂದ್ರದ ಉದ್ದೇಶಗಳನ್ನು ಎಲ್ಲ ಶಿಕ್ಷಕರಿಗೆ ತಿಳಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಶ್ರೀಶೈಲ ಬಿರಾದಾರ ಅವರು ನಮ್ಮ ಜಿಲ್ಲೆಯಲ್ಲಿ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ವಿದ್ಯಾರ್ಥಿಗಳು ಕಡಿಮೆ ಅಂಕಗಳನ್ನು ಪಡೆಯುತ್ತಿದ್ದು, ವೈಜ್ಞಾನಿಕವಾಗಿ ಈ ತರಹದ ಕಾರ್ಯಗಾರವು ಶಿಕ್ಷಕರಲ್ಲಿ ನೂತನ ತಾಂತ್ರಿಕತೆಗಳನ್ನು ಅಳವಡಿಸಲು ಅನುಕೂಲಕರವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಡಿವಾಯ್‍ಪಿಸಿಯ ಅಧಿಕಾರಿ ಜಾಸ್ಮೀನ್ ಕಿಲ್ಲೆದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.