ಚಿತ್ರಕಲೆಯ ಪಾತ್ರ ಪ್ರಮುಖವಾದದ್ದು: ಈರಣ್ಣ ಬೆಂಗಾಲಿ

ರಾಯಚೂರು.ಅ.೩೧- ವ್ಯಕ್ತಿತ್ವ ನಿರ್ಮಾಣ ಮಾಡುವುದರಲ್ಲಿ ಚಿತ್ರಕಲೆಯೊಂದಿಗೆ ಇತರೆ ಹವ್ಯಾಸಗಳನ್ನು ಮಕ್ಕಳು ಬೆಳೆಸಿಕೊಳ್ಳಬೇಕು ಎಂದು ವ್ಯಂಗ್ಯಚಿತ್ರ ಕಲಾವಿದರಾದ ಈರಣ್ಣ ಬೆಂಗಾಲಿ ಅವರು ಹೇಳಿದರು.
ಅವರು ಇಂದು ರಾಯಚೂರಿನ ಸರ್ವೋದಯ ಇ-ಟೆಕ್ನೋ ಶಾಲೆಯಲ್ಲಿ ಕಲಾತಪಸ್ವಿ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಚಿತ್ರಕಲೆಯ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಪಠ್ಯದ ಜೊತೆ ಜೊತೆಗೆ ಚಿತ್ರಕಲೆ, ಸಂಗೀತ, ನೃತ್ಯ, ಭಾಷಣ, ಪ್ರಬಂಧ, ಕ್ರೀಡೆ ಇನ್ನಿತರ ಕ್ಷೇತ್ರದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಾಗ ಸವಾಂಗೀಣ ಅಭಿವೃದ್ಧಿ ಆಗಲು ಸಾಧ್ಯ, ಅಂಕಗಳು ಮಾತ್ರ ನಮ್ಮ ಬುದ್ದಿಮಟ್ಟ ನಿರ್ಧರಿಸಲಾರವು. ಇದರೊಂದಿಗೆ ಜ್ಞಾನ, ಶಿಸ್ತು, ಹವ್ಯಾಸಗಳು, ನಮ್ಮ ವ್ಯಕ್ತಿತ್ವ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು. ಚಿತ್ರಕಲಾವಿದರಾದ ಅಶೋಕ ಅವರು ಶಿಕ್ಷಣದಲ್ಲಿ ಚಿತ್ರಕಲೆಯ ಪ್ರಾಮುಖ್ಯತೆಯ ಕುರಿತು ಮಾತಾಡಿದರು.
ಈ ಸಂದರ್ಭದಲ್ಲಿ ಚಿತ್ರಕಲಾ ಶಿಕ್ಷಕ ನರಸಪ್ಪ ಅರೋಲಿ ಇವರಿಗೆ ಸನ್ಮಾನಿಸಲಾಯಿತು. ಶಾಲೆಯ ನಿರ್ದೇಶಕರಾದ ಸಿ.ಪ್ರವೀಣ ಕುಮಾರ್, ಅಧ್ಯಕ್ಷರಾದ ಚಂದ್ರಕಾಂತ ಮೋನಳ್ಳಿ ಉಪಸ್ಥಿತರಿದ್ದರು. ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.