ಚಿತ್ರಕಲೆಯಲ್ಲಿ ಹೊಸ ಕೌಶಲ್ಯ ರೂಢಿಸಿಕೊಳ್ಳಲು ಪ್ರೇರಣೆ

ಮಂಗಳೂರು ,ಎ.೨- ಕರಾವಳಿ ಚಿತ್ರಕಲಾ ಚಾವಡಿ ಆಶ್ರಯದಲ್ಲಿ ’ಚಿತ್ರ ಸಂಜೆ’ ಕಾರ್ಯಕ್ರಮ ನಗರದ ಕೊಡಿಯಾಲ್ ಗುತ್ತು ಕಲಾ ಸಂಸ್ಕೃತಿ ಕೇಂದ್ರದಲ್ಲಿ ಗುರುವಾರ ಜರುಗಿತು. ಚಾವಡಿಯ ಗೌರವಾಧ್ಯಕ್ಷ ಮತ್ತು ನಿವೃತ್ತ ಚಿತ್ರಕಲಾ ಶಿಕ್ಷಕ ಗಣೇಶ ಸೋಮಯಾಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸದಸ್ಯರು ತಮ್ಮ ನೂತನ
ಕಲಾಕೃತಿಗಳನ್ನು ಪ್ರದರ್ಶಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಕಾರ್ಯದರ್ಶಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ ’ಕುಂಚ ಕಲಾವಿದರು ಸಂಘಟನಾತ್ಮಕವಾಗಿ ಒಟ್ಟುಗೂಡಿ ಸೃಜನಾತ್ಮಕ ಕಲೆಗಾರಿಕೆಯಲ್ಲಿ ತೊಡಗಿರುವುದು ಉತ್ತಮ ಬೆಳವಣಿಗೆ. ಇದರಿಂದ ಕಿರಿಯರಿಗೆ ಹಿರಿಯ ಕಲಾವಿದರ ಮಾರ್ಗದರ್ಶನ ದೊರೆಯುವುದಲ್ಲದೆ ಚಿತ್ರರಚನೆಯಲ್ಲಿ ಹೊಸ ಹೊಸ ಕೌಶಲ್ಯಗಳನ್ನು ರೂಢಿಸಿಕೊಳ್ಳಲು ಪ್ರೇರಣೆ ಒದಗುವುದು’ ಎಂದರು. ಕರಾವಳಿ ಚಿತ್ರಕಲಾ ಚಾವಡಿಯ ಅಧ್ಯಕ್ಷ ಹಾಗೂ ನಗರದ ಪ್ರಸಾದ್ ಆರ್ಟ್ ಗ್ಯಾಲರಿ ನಿರ್ದೇಶಕ ಕೋಟಿ ಪ್ರಸಾದ್ ಆಳ್ವ ಅಧ್ಯಕ್ಷತೆ ವಹಿಸಿದ್ದರು.
ಚಿತ್ರಕಲಾ ಚಾವಡಿಯ ಕಾರ್ಯದರ್ಶಿ ಡಾ.ಎಸ್.ಎಮ್.ಶಿವಪ್ರಕಾಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಚಿತ್ರ ಕಲಾವಿದೆ ಭಾಗೀರಥಿ ಭಂಡಾರ್ಕರ್ ಅತಿಥಿಗಳಿಗೆ ಸ್ಮರಣಿಕೆಯಿತ್ತರು. ಕಲಾವಿದ ಶರತ್ ಹೊಳ್ಳ ವಂದಿಸಿದರು. ಕಲಾವಿದರಾದ ಅನಂತ ಪದ್ಮನಾಭ ರಾವ್, ದಿನೇಶ್ ಹೊಳ್ಳ ,ಜಾನ್ ಚಂದ್ರನ್ , ಗಿಳಿಯಾರ್ ಜಯರಾಮ ಭಟ್, ಕಮಲ್ , ಮುರಳಿಧರ ಕೆ.ಎಸ್., ಜಯಶ್ರೀ ಶರ್ಮಾ, ಖುರ್ಷಿದ್ ಯಾಕೂಬ್, ರೂಪಾ ವಸುಂಧರಾ ಆಚಾರ್ಯ, ಡಾ.ಸಮ್ಜ್ಯೋತಾ ಧರ್ಮ, ನವೀನ್ ಕೋಡಿಕಲ್, ಅರುಣ್ ಕಾರಂತ್, ನವೀನ್ ಚಂದ್ರ ಬಂಗೇರ, ಈರಣ್ಣ ತಿಪ್ಪಣ್ಣವರ್, ವೀಣಾ ಮಧುಸೂದನ್, ದೀಪ್ತಿ ಪಿ., ಮನೋರಂಜಿನಿ ಮೊದಲಾದವರು ’ಚಿತ್ರ ಸಂಜೆ’ ಚಿತ್ರಕಲಾ
ಪ್ರದರ್ಶನದಲ್ಲಿ ಪಾಲ್ಗೊಂಡರು.