ಚಿತ್ತಾಪುರ ಸಿದ್ದರಾಮೇಶ್ವರ ಜಯಂತಿಗೆ ತಾಲೂಕು ಆಡಳಿತ ನಿರ್ಲಕ್ಷ್ಯ.ಭೋವಿ ವಡ್ಡರ ಸಮಾಜದಿಂದ ಮಿಂಚಿನ ಪ್ರತಿಭಟನೆ

ಚಿತ್ತಾಪುರ: ಜ.16:ಕಾಯಕಯೋಗಿ ಸಿದ್ದರಾಮೇಶ್ವರರ ಜಯಂತಿ ಕಾರ್ಯಕ್ರಮಕ್ಕೆ ತಾಲೂಕು ಆಡಳಿತ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂದು ಆಕ್ರೋಶವ್ಯಕ್ತಪಡಿಸಿದ ಭೋವಿ ವಡ್ಡರ ಸಮಾಜದ ಮುಖಂಡರು ತಹಹೀಲ್ ಕಚೇರಿ ಎದುರಿಗೆ ಕುಳಿತುಕೊಂಡು ತಹಸೀಲ್ದಾರರ ವಿರುದ್ದ ದಿಕ್ಕಾರ ಕೂಗುತ್ತಾ ಮಿಂಚಿನ ಪ್ರತಿಭಟನೆ ನಡೆದ ಪ್ರಸಂಗ ಸೋಮವಾರ ನಡೆಯಿತು.

ಸರಕಾರದ ಸುತ್ತೋಲೆ ಪ್ರಕಾರ ಕಾಯಕಯೋಗಿ ಸಿದ್ದರಾಮೇಶ್ವರರ ಜಯಂತಿ ಕಾರ್ಯಕ್ರಮವನ್ನು ಜ.15 ರಂದು ತಾಲೂಕು ಆಡಳಿತ ವತಿಯಿಂದ ತಹಸೀಲ್ ಕಚೇರಿಯಲ್ಲಿ ತಹಸೀಲ್ದಾರರ ನೇತೃತ್ವದಲ್ಲಿ ನಡೆಯಬೇಕು ಬೆಳಗ್ಗೆ 11 ಗಂಟೆಯಾದರೂ ಯಾವೊಬ್ಬ ಅಧಿಕಾರಿಗಳು ತಹಸೀಲ್ ಕಚೇರಿ ಕಡೆ ಸುಳಿಯಲೇ ಇಲ್ಲ ಕೊನಗೆ ಭೋವಿ ವಡ್ಡರ ಸಮಾಜದ ಮುಖಂಡರೇ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಿದರು.

ಈ ಸಂದರ್ಭದಲ್ಲಿ ಗ್ರಾಮಲೇಖಾಪಾಲಕ ಮೈನೋದ್ದಿನ್ ಮಾತ್ರ ಹಾಜರಿದ್ದರು. ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಕಚೇರಿಗಳಲ್ಲಿ ಜಯಂತಿ ಆಚರಿಸಿ ತಹಸೀಲ್ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲ ಅಧಿಕಾರಿಗಳು ಭಾಗವಹಿಸಬೇಕು ಆದರೆ ಸಿದ್ದರಾಮೇಶ್ವರ ಜಯಂತಿಗೆ ತಹಸೀಲ್ದಾರ ಮೊದಲು ಮಾಡಿಕೊಂಡು ಎಲ್ಲ ಅಧಿಕಾರಿಗಳು ಗೈರು ಹಾಜರಿಯಾಗಿರುವುದಕ್ಕೆ ಸಮಾಜದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಮಾಜದ ಮುಖಂಡ ಮಹೇಶ ಕಾಶಿ ಮಾತನಾಡಿ, ಹನ್ನೆರಡನೇ ಶತಮಾನದ ಶ್ರೇಷ್ಠ ವಚನಕಾರ ಕಾಯಕಯೋಗಿ ಸಿದ್ದರಾಮೇಶ್ವರರ ಜಯಂತಿ ಕಾರ್ಯಕ್ರಮಕ್ಕೆ ತಾಲೂಕು ಆಡಳಿತ ನಿರ್ಲಕ್ಷ?? ವಹಿಸುವ ಮೂಲಕ ಭೋವಿ ಸಮಾಜಕ್ಕೆ ಅವಮಾನ ಮಾಡಿದಂತಾಗಿದೆ, ಕೂಡಲೇ ತಾಲೂಕು ಆಡಳಿತದ ವಿರುದ್ದ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮುಖಂಡ ಭೀಮಣ್ಣ ಕರದಾಳ ಮಾತನಾಡಿ, ಸಿದ್ದರಾಮೇಶ್ವರ ಜಯಂತಿಯ ಪೂರ್ವಭಾವಿಗೆ ಸಭೆಗೆ ಅಧಿಕಾರಿಗಳು ಗೈರು ಹಾಜರಿದ್ದರು ಈಗ ಜಯಂತಿ ಕಾರ್ಯಕ್ರಮಕ್ಕೂ ಗೈರು ಹಾಜರಿಯಾಗಿ ತಮ್ಮ ಬೇಜವಾಬ್ದಾರಿ ತೋರಿಸಿದ್ದಾರೆ, ಇಂತಹ ಅಧಿಕಾರಿಗಳ ವಿರುದ್ದ ಜಿಲ್ಲಾಡಳಿತ ಹಾಗೂ ಕ್ಷೇತ್ರದ ಶಾಸಕರು ಸಚಿವರು ಆದ ಪ್ರಿಯಾಂಕ್ ಖರ್ಗೆ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಭೋವಿ ವಡ್ಡರ ಸಮಾಜದ ತಾಲೂಕು ಅಧ್ಯಕ್ಷ ಹಣಮಂತ ಚೌದರಿ ಕಟ್ಟಿಮನಿ, ಕಾಶಿ ಸಮಾಜದ ಅಧ್ಯಕ್ಷ ರಾಜೇಶ ಕಾಶಿ, ನಗರಾಧ್ಯಕ್ಷ ಸಂತೋಷ ಕಾಶಿ, ಮುಖಂಡರಾದ ವಿಠ್ಠಲ್ ಕಟ್ಟಿಮನಿ, ಸುಭಾಷ್ ಕಾಶಿ, ಮಹೇಶ ಎನ್. ಕಾಶಿ, ರವಿ ವಿಟ್ಕರ್, ಯಮನಪ್ಪ ಬೋಸಗಿ, ಚಂದ್ರು ಕಾಶಿ, ಕೃಷ್ಣಾ ಭಂಕಲಗಿ, ಮೋಹನ ಕಾಶಿ, ಪ್ರಭು ಕಾಶಿ, ಅನೀಲ ಕಾಶಿ, ಅಶೋಕ ಕಾಶಿ, ತಿಮ್ಮಯ್ಯ ಪವಾರ, ಚಂದ್ರಕಾಂತ ದ್ಯಾವನೂರ ಇತರರು ಇದ್ದರು.

“ಸಿದ್ದರಾಮೇಶ್ವರರ ಜಯಂತಿ ಜ.15 ರಂದು ಆಚರಿಸಬೇಕು ಎಂಬ ಸರಕಾರದ ಸುತ್ತೋಲೆ ಇದ್ದರೂ ಸಹ ಅಧಿಕಾರಿಗಳು ಮಾತ್ರ ಅದನ್ನು ದಿಕ್ಕರಿಸಿ ಜಯಂತಿ ಕಾರ್ಯಕ್ರಮಕ್ಕೆ ಗೈರು ಹಾಜರಿಯಾಗುವ ಮೂಲಕ ಕಾಯಕಯೋಗಿಗೆ ಅವಮಾನಿಸಿದ್ದಾರೆ, ಕೂಡಲೇ ಜಯಂತಿ ಆಚರಿಸದ ಹಾಗೂ ಕಾರ್ಯಕ್ರಮಕ್ಕೆ ಗೈರು ಹಾಜರಿಯಾದ ಅಧಿಕಾರಿಗಳ ಮೇಲೆ ಜಿಲ್ಲಾಧಿಕಾರಿಗಳು ಶಿಸ್ತಿನ ಕ್ರಮ ಕೈಗೊಳ್ಳಬೇಕು”.

-ಚಂದ್ರಶೇಖರ ಕಾಶಿ ಪುರಸಭೆ ಮಾಜಿ ಅಧ್ಯಕ್ಷರು.