ಚಿತ್ತಾಪುರ ತಾಲೂಕಿನಾದ್ಯಂತ ಭಾರೀ ಮಳೆಗೆ ಜನ ಜೀವನ‌ ಅಸ್ತವ್ಯಸ್ತ

ಕಲಬುರಗಿ:ಸೆ.16-ಚಿತ್ತಾಪುರ ತಾಲೂಕಿನಾದ್ಯಂತ ಭಾರೀ ಮಳೆಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು ನಷ್ಟದ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕರಾದ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಸುಮಾರು 150 ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದ್ದು, ಆಹಾರ ಸಾಮಗ್ರಿ ಸೇರಿದಂತೆ ಅಗತ್ಯ ದಾಖಲಾತಿಗಳು ನೀರುಪಾಲಾಗಿವೆ. ಬಹುತೇಕ ಜನರ ದಿನನಿತ್ಯದ ಉಪಜೀವನಕ್ಕೆ ಕಾರಣವಾಗಿದ್ದ ಜಾನುವಾರುಗಳು, ಕುರಿಗಳು ನೀರಿನಲ್ಲಿ ಕೊಚ್ಚಿಹೋಗಿದ್ದು ಜನ ಜೀವನ‌ ಅಸ್ತವ್ಯಸ್ತಗೊಂಡಿದೆ. ಈ ಹಿನ್ನೆಲೆಯಲ್ಲಿ ಮಳೆಯಿಂದ ಸಂಭವಿಸಿದ ಹಾನಿಯ ಅಂದಾಜು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ನಡುವೆ ಸಂಕಷ್ಟಕ್ಕೀಡಾದ ಜನರ ನೆರವಿಗೆ ಕಾಂಗ್ರೆಸ್ ಪಕ್ಷ ಧಾವಿಸಿದ್ದು 250 ಕ್ಕೂ ಹೆಚ್ಚು ಕುಟುಂಬಗಳಿಗೆ ಅಹಾರ ಧಾನ್ಯ ಹಾಗೂ ಅಗತ್ಯ ವಸ್ತುಗಳನ್ನು ಪೂರೈಸಲಾಗಿದೆ. ಭಾರೀ ಮಳೆ ನೆರೆಯನ್ನುಂಟುಮಾಡಿದ್ದು ಈ ಸಂದರ್ಭದಲ್ಲಿ ಕುಡಿಯುವ ಸ್ವಚ್ಛ ನೀರು ಪೂರೈಕೆ ಹಾಗೂ ಸಾಂಕ್ರಾಮಿಕ ರೋಗ ನಿಯಂತ್ರಣ ನಮ್ಮ ಮೊದಲ ಆದ್ಯತೆಯಾಗಿದ್ದು ತುರ್ತು ಹಾಗೂ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ. ನೆರೆ ಕಡಿಮೆಯಾದ ನಂತರ ಮೂಲ ಸೌಲಭ್ಯ ನಷ್ಟದ ಕುರಿತು ವರದಿ ತಯಾರಿಸಲಾಗುವುದು ಎಂದು ತಿಳಿಸಿದ್ದಾರೆ.