ಚಿತಾಗಾರ ಸಿಬ್ಬಂದಿಗೆ ಪ್ರೋತ್ಸಾಹ ಧನ

ಬೆಂಗಳೂರು, ಏ.೨೩- ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರು ಸಾವನ್ನಪ್ಪುತ್ತಿರುವ ಕಾರಣ ವಿದ್ಯುತ್ ಚಿತಾಗಾರದ ಸಿಬ್ಬಂದಿಯ ಕಾರ್ಯದಲ್ಲಿ ಹೊರೆ ಆಗಿರುವ ಹಿನ್ನೆಲೆ ಅವರಿಗೆ ಪ್ರೋತ್ಸಾಹ ಧನ ನೀಡಲು ಬಿಬಿಎಂಪಿ ಮುಂದಾಗಿದೆ.
ಎಲ್ಲಾ ಚಿತಾಗಾರದ ಸಿಬ್ಬಂದಿಗೆ ಕೊರೋನಾ ಮತ್ತು ಕೊರೇನತರ ಸಮಸ್ಯೆಯಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ(ತಲಾ) ೫೦೦ ರೂ. ಪ್ರೋತ್ಸಾಹ ಧನ ನೀಡಲು ಪಾಲಿಕೆ ನಿರ್ಧರಿಸಿದ್ದು, ಏ.೧ರಿಂದ ಅನ್ವಯವಾಗುವಂತೆ ಈ ಆದೇಶ ಜಾರಿಯಾಗಿದೆ.
ಮುಂದಿನ ಎರಡು ತಿಂಗಳ ವರೆಗೆ ಪ್ರೋತ್ಸಾಹ ಧನ ನೀಡಲು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಆದೇಶ ಹೊರಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಕೊರೋನಾ ಸೋಂಕಿನಿಂದ ಮೃತಪಡುವ ವ್ಯಕ್ತಿ ಶವ ಸಂಸ್ಕಾರ ಲಕ್ಕೆ ಬಳಸುವ ಚಟ್ಟದ ಹಣ (ಪ್ರತಿ ಚಟ್ಟಕ್ಕೆ) ೯೦೦ ರೂ. ಬೂದಿ ಸಂಗ್ರಹ ಮಾಡುವ ಮಡಿಕೆಗೆ ೧೦೦ ರೂ. ಸೇರಿ ಒಟ್ಟು ಒಂದು ಸಾವಿರ ರೂ. ಹಾಗೂ ಚಿತಾಗಾರದಲ್ಲಿ ನಡೆಯುವ ಎಲ್ಲ ಶವ ಸಂಸ್ಕಾರಕ್ಕೂ ಸಿಬ್ಬಂದಿಗೆ ತಲಾ ೫೦೦ ರೂ. ಪ್ರೋತ್ಸಾಹ ಧನ ನಿಗದಿ ಮಾಡಲಾಗಿದೆ.
ಎಲ್ಲಾ ಪ್ರೋತ್ಸಾಹ ಧನವನ್ನೂ ಕೋವಿಡ್ -೧೯ ನಿಧಿಯಿಂದ ಬಳಸಿಕೊಳ್ಳಲು ನಿರ್ದೇಶನ ನೀಡಲಾಗಿದ್ದು, ಉಚಿತ ಕೊರೋನಾ ಶವ ಸಂಸ್ಕಾರ ಮುಂದುವರಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.