ಚಿಣ್ಣರ ಸೆಳೆಯುವ ಸೂಪರ್ ಅಂಗನವಾಡಿ

ಔರಾದ್:ಏ.05: ಜಲ ಸಂರಕ್ಷಣೆ, ಸೋಲಾರ ಬಳಕೆಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದ ಧೂಪತಮಹಾಗಾಂವ್ ಗ್ರಾಮ ಪಂಚಾಯಿತಿ ಇದೀಗ ವಿನೂತನ ಮಾದರಿಯ ಸೂಪರ್ ಅಂಗನವಾಡಿ ನಿರ್ಮಿಸುವ ಮೂಲಕ ಗಮನ ಸೆಳೆದಿದೆ.

ತಾಲ್ಲೂಕಿನ ಜೀರ್ಗಾ (ಬಿ) ಗ್ರಾಮದಲ್ಲಿ ಇಂಥದೊಂದು ಸೂಪರ್ ಅಂಗನವಾಡಿ ಕಟ್ಟಡ ಸಿದ್ಧಗೊಂಡು ಚಿಣ್ಣರನ್ನು ಕೈಬೀಸಿ ಕರೆಯುತ್ತಿದೆ. ಎಸ್‍ಸಿಪಿ-ಟಿಎಸ್‍ಪಿಯ ₹2 ಲಕ್ಷ ಅನುದಾನ ಬಳಸಿಕೊಂಡು ಕೇವಲ ಒಂದೇ ತಿಂಗಳಲ್ಲಿ ಈ ಅದ್ಭುತ ಮತ್ತು ಅಕರ್ಷಕ ಕಟ್ಟಡ ನಿರ್ಮಾಣವಾಗಿದೆ.

‘ಕ್ರಿಯೆಟಿವ್ ಫೌಂಡೇಶನ್ ಅಧ್ಯಕ್ಷ ಸಾಗರ್ ಅವರು ಈ ಅಂಗನವಾಡಿ ಕಟ್ಟಡಕ್ಕೆ ವಿನೂತನ ಡಿಸೈನ್ ಕೊಟ್ಟು ತಮ್ಮ ಸ್ವಂತ ಖರ್ಚಿನಿಂದ ಸೋಲಾರ್ ಬೆಳಕಿನ ವ್ಯವಸ್ಥೆ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ಜೊನ್ನೆಕೇರಿ ಹಾಗೂ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳ ಸಹಕಾರದಿಂದ 25*30 ಜಾಗದಲ್ಲಿರುವ ಹಳೆ ಅಂಗನವಾಡಿ ಕಟ್ಟಡಕ್ಕೆ ಇಂಥಹ ಅದ್ಭುತ ರೂಪ ನೀಡಲಾಗಿದೆ’ ಎಂದು ಪಿಡಿಒ ಶಿವಾನಂದ ಔರಾದೆ ತಿಳಿಸಿದ್ದಾರೆ.’ಗ್ರಾಮೀಣ ಭಾಗದ ಬಡ ಮಕ್ಕಳಿಗೂ ಖಾಸಗಿ ಕಾನ್ವೆಂಟ್ ಮಾದರಿ ಶಿಕ್ಷಣ ಕೊಡುವ ಉದ್ದೇಶ ಇಟ್ಟುಕೊಂಡು ಈ ಅಂಗನವಾಡಿ ರೂಪಿಸಲಾಗಿದೆ. ಇಡೀ ಅಂಗನವಾಡಿ ಕಟ್ಟಡ ವೈವಿಧ್ಯಮಯ ಬಣ್ಣಗಳಿಂದ ಪೇಂಟ್ ಮಾಡಲಾಗಿದೆ. ಗೋಡೆ ಮೇಲೆ ಪ್ರಾಣಿ, ಪಕ್ಷಿ, ಅದ್ಭುತ ಪ್ರಾಕೃತಿಕ ಚಿತ್ರಗಳನ್ನು ಬಿಡಿಸಲಾಗಿದೆ. ಪಾಠ ಬೋಧನೆಗೆ ಬೇಕಾಗುವ ಚಾರ್ಟ್‍ಗಳ, ಮಾದರಿಗಳು, ಆಟಿಕೆ ವ್ಯವಸ್ಥೆ ಮಾಡಲಾಗಿದೆ. ಜೋಕಾಲಿ, ಜಾರು-ಬಂಡಿಯೂ ಅಳವಡಿಸಲಾಗಿದೆ. ಸ್ವಚ್ಛ ಹಾಗೂ ಸುಂದರ ಅಡುಗೆ ಕೋಣೆ, ಶುದ್ಧ ನೀರು ಹಾಗೂ ಬಾಲಸ್ನೇಹಿ ಶೌಚಾಲಯ ವ್ಯವಸ್ಥೆ ಮಾಡಿದ್ದು ಅಂಗನವಾಡಿಯ ಮಹತ್ವ ಹೆಚ್ಚಿದೆ’ ಎಂದು ಅವರು ಹೇಳಿದ್ದಾರೆ.
‘ನಮ್ಮ ಈ ಸೂಪರ್ ಅಂಗವಾಡಿ ಕಟ್ಟಡ ರಚನೆ ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಗ್ರಾಮೀಣ ಮತ್ತು ಪಂಚಾಯತ್ ರಾಜ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳನ್ನು ಕರೆಸಿ ಆದಷ್ಟು ಬೇಗ ಈ ಕಟ್ಟಡದ ಉದ್ಘಾನೆ ಮಾಡಲಾಗುವುದು’ ಎಂದು ಶಿವಾನಂದ ಅವರು ತಿಳಿಸಿದ್ದಾರೆ.