ಚಿಟ್ಟಾವಾಡಿ ಆಶ್ರಯ ನಿವಾಸಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿ

ಬೀದರ್: ಜು.13:ತಾಲೂಕಿನ ಚಿಟ್ಟಾವಾಡಿ ಆಶ್ರಯ ಮನೆಗಳಲ್ಲಿ ಸುಮಾರು 200 ಕುಟುಂಬಗಳು ಸುಮಾರು 10 ವರ್ಷಗಳಿಂದ ವಾಸವಾಗಿದ್ದಾರೆ. ಚಿಟ್ಟಾವಾಡಿ ಆಶ್ರಯ ನಿವಾಸಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಭೀಮವಾದ) ಜಿಲ್ಲಾ ಸಮಿತಿಯ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಭೀಮವಾದ) ಜಿಲ್ಲಾ ಸಮಿತಿಯವರು, ಈ ಹಲವು ಸಲ ಹೋರಾಟ ಮಾಡಲಾಗಿದ್ದು, ಹೋರಾಟಕ್ಕೆ ಸ್ಪಂದಿಸಿ ಹಿಂದಿನ ಜಿಲ್ಲಾಧಿಕಾರಿ ರಾಮಚಂದ್ರ ಅವರು ಬಡ ಜನರ ನೋವನ್ನು ಕಂಡು ಚಿಟ್ಟಾವಾಡಿ ಆಶ್ರಯ ನಿವಾಸಿಗಳಿಗೆ ನೀರಿನ ವ್ಯವಸ್ಥೆ ವಿದ್ಯುತ್ ಕಲ್ಪಿಸಿಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಈಗಲೂ ತುಂಬಾ ಅವಶ್ಯಕತೆ ಇರುವ ಮೂಲಭೂತ ಸೌಲಭ್ಯಗಳಾದ ಸಮುದಾಯ ಆರೋಗ್ಯ ಕೇಂದ್ರ, ಅಂಗನವಾಡಿ ಕೇಂದ್ರ, ಕಿರಿಯ ಪ್ರಾಥಮಿಕ ಶಾಲೆ ಹಾಗೂ ಹಕ್ಕು ಪತ್ರಗಳ ಅವಶ್ಯಕತೆ ಇರುತ್ತದೆ. ಆದ್ದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಆಶ್ರಯ ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಟ್ಟು ಬಡ ಜನರಿಗೆ ಅನ್ಯಾಯ ದೊರಕಿಸಿಕೊಡಬೇಕು ಎಂದು ವಿನಂತಿಸಿಕೊಂಡಿದ್ದಾರೆ.

ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಭೀಮವಾದ) ಜಿಲ್ಲಾ ಸಮಿತಿಯ ಜಿಲ್ಲಾ ಸಂಚಾಲಕರಾದ ಕಲ್ಯಾಣರಾವ ಭೋಸ್ಲೆ, ಜಿಲ್ಲಾ ಸಂಘಟನಾ ಸಂಚಾಲಕರಾದ ಪ್ರಭಾಕರ ಭೋಸ್ಲೆ, ನಾಗೇಶ ಮಿರ್ಜಾಪೂರ, ಸಮಿತಿಯ ಪದಾಧಿಕಾರಿಗಳಾದ ಸಂಜುಕುಮಾರ ಮೇತ್ರೆ, ಮಾಣಿಕರಾವ ಬಿ. ಪವಾರ, ಮಲ್ಲಿಕಾರ್ಜುನ ಗೋರನಾಳಕರ್, ಸಂಜುಕುಮಾರ ಲಾಧಾ, ಗೌತಮ ಭೋಸ್ಲೆ ಅವರು ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.