ಚಿಕ್ಕ ತಿರುಪತಿ ಬೂದುಬಾಳು ಶ್ರೀವೆಂಕಟರಮಣ ಸ್ವಾಮಿ ರಥೋತ್ಸವ: ರಾಘವೇಂದ್ರ ರಾಜಕುಮಾರ್ ಭಾಗಿ

ಸಂಜೆವಾಣಿ ವಾರ್ತೆ
ಹನೂರು: ಮಾ.26:- ತಾಲೂಕಿನ ಪ್ರಸಿದ್ದ ಯಾತ್ರಸ್ಥಳ ಬೂದುಬಾಳು ಚಿಕ್ಕ ತಿರುಪತಿ ಗುಡಿಹಟ್ಟಿ ಶ್ರೀ ವೆಂಕಟರಮಣ ಸ್ವಾಮಿ ಜಾತ್ರಾ ಬ್ರಹ್ಮ ರಥೋತ್ಸವವು ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ರಥೋತ್ಸವಕ್ಕೆ ರಾಘವೇಂದ್ರ ರಾಜಕುಮಾರ್ ಆಗಮಿಸಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.
ಚಿಕ್ಕ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ತಾಲ್ಲೂಕಿನ ಪ್ರಸಿದ್ಧ ಪುಣ್ಯ ಕ್ಷೇತ್ರ ಬೂದುಬಾಳು ವೆಂಕಟ ರಮಣಸ್ವಾಮಿ ದೇಗುಲದಲ್ಲಿ ಇಂದು ಸೋಮವಾರ ಹೋಳಿ ಹುಣ್ಣಿಮೆ ದಿನದ ಶುಭ ಲಗ್ನದಲ್ಲಿ ಬೆಳಿಗ್ಗೆ 12-30 ಗಂಟೆಗೆ ದೇವಸ್ಥಾನದ ಧರ್ಮಧಿಕಾರಿ ನೇತೃತ್ವದಲ್ಲಿ ಬ್ರಹ್ಮ ರಥೋತ್ಸವದ ವಿಶೇಷ ಪೂಜಾ ಕಾರ್ಯಗಳು ಧಾರ್ಮಿಕ ವಿಧಾನಗಳೊಂದಿಗೆ ಜರುಗಿತು. ಹಾಗೂ ನೆರೆದಿದ್ದ ಭಕ್ತರ ಗೋವಿಂದ… ಗೋವಿಂದ……. ಜೈಕಾರ ಹಾಕುತ್ತಾ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ದೇವಾಲಯದ ಗರ್ಭಗುಡಿಯಲ್ಲಿದ್ದ ವೆಂಕಟರಮಣಸ್ವಾಮಿ ವಿಗ್ರಹ ಮೂರ್ತಿಯನ್ನು ಹೊರ ತಂದು ತೇರಿನ ಸುತ್ತ 3 ಬಾರಿ ಪ್ರದಕ್ಷಣೆ ಹಾಕಿ ಬಳಿಕ ತೇರಿನ ಮೇಲೆ ವಿಗ್ರಹ ಇಟ್ಟು ಪೂಜೆ ಸಲ್ಲಿಸಿದರು. ಬಳಿಕ ಭಕ್ತರು ಗೋವಿಂದನ ನಾಮ ಸ್ಮರಣೆಯ ಹರ್ಷೋದ್ಗಾರದೊಂದಿಗೆ ಶ್ರದ್ದಾ ಭಕ್ತಿಯಿಂದ ರಥವನ್ನು ಎಳೆದರು. ಪ್ರತಿ ವರ್ಷದಂತೆ ಬ್ರಹ್ಮರಥೋತ್ಸವ ಸಾಗುವ ಮುನ್ನ ಆಕಾಶದಲ್ಲಿ ರಥ ಮತ್ತು ದೇಗುಲದ ಸುತ್ತ ಗರುಡ ಪಕ್ಷಿ ಹಾರಾಡುವುದು ವಿಶೇಷವಾಗಿ ಭಕ್ತರ ಅಚ್ಚರಿಗೆ ಕಾರಣವಾಗಿತ್ತು.
ಬ್ರಹ್ಮರಥೋತ್ಸ ಸಾಗುತ್ತಿದ್ದಂತೆ ನೆರೆದಿದ್ದ ಸಾವಿರಾರು ಭಕ್ತರು ಹಾಗೂ ಸಾಂಪ್ರದಾಯಕ ಉಡುಗೆ ಧರಿಸಿ ಕೊಂಡಿದ್ದ ಕರಿಯಣ್ಣ ಕೆಂಚಣ್ಣನ ವಿಗ್ರಹ ಹಿಡಿದ ದಾಸಯ್ಯರ ತಂಡದಿಂದ ಶ್ರೀ ವೆಂಕಟ ರಮಣ ಸ್ವಾಮಿ ಗೋವಿಂದಾ ಗೋವಿಂದಾ ಎಂದು ಘೋಷಣೆ ಕೂಗಿ ಹರ್ಷೋದ್ಘಾರ ಮೊಳಗಿಸಿದರು.
ಭಕ್ತರು ಮತ್ತು ನವ ವಧು ವರರು ರಥಕ್ಕೆ ಹಣ್ಣು-ಜವನ ಎಸೆದರು. ರೈತರು ರಾಗಿ ಜೋಳ ಅಕ್ಕಿ ಹೂವು ನಗ ನಾಣ್ಯ ಇನ್ನಿತರ ದವಸ ಧಾನ್ಯ ಎಸೆದು ಪುನೀತರಾದರು. ಇದೇ ವೇಳೆ ತಮಟೆ ಶಂಖ ಹಾಗೂ ಜಾಗಟೆ ಸದ್ದು ಮೊಳಗಿದವು. ವಿವಿಧ ಗ್ರಾಮಗಳಿಂದ ಜಾತ್ರೆಗೆ ಆಗಮಿಸಿದ ಭಕ್ತರಿಗೆ ದಾನಿಗಳು ಅಲ್ಲಲ್ಲಿ ಪಾನಕ ಮಜ್ಜಿಗೆ ಕಡ್ಲೆ ಗುಗ್ಗರಿ ವಿತರಣೆ ಮತ್ತು ಅನ್ನ ಸಂತರ್ಪಣೆ ಮಾಡಿ ಹರಕೆ ತೀರಿಸಿದರು.
ಕೊಳ್ಳೇಗಾಲ ಕಾಮಗೆರೆ ದೊಡ್ಡಿಂದುವಾಡಿ ಸಿಂಗಾನಲ್ಲೂರು ಹನೂರು ಬೂದಬಾಳು ಬಿ.ಗುಂಡಾಪುರ ಮಂಗಲ ಕಣ್ಣೂರು ಶಾಗ್ಯ, ಮಣಗಳ್ಳಿ ಬಂಡಳ್ಳಿ, ಕರಿಯನಪುರ ಪಾಳ್ಯ ಚನ್ನಲಿಂಗನಹಳ್ಳಿ, ರಾಮಾಪುರ ಲೊಕ್ಕನಹಳ್ಳಿ ಭಾಗ ಸೇರಿದಂತೆ ಜಿಲ್ಲೆ ಅಲ್ಲದೆ ಇನ್ನಿತರ ಜಿಲ್ಲೆ ಗ್ರಾಮಗಳಿಂದ ಭಕ್ತರು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡು ಜಾತ್ರೆಯ ವಿಶೇಷತೆಯ ಮೆರುಗನ್ನು ಕಣ್ತುಂಬಿಸಿ ಕೊಂಡರು. ಸ್ಥಳೀಯರು ಸೇರಿದಂತೆ ವಿವಿದೆಡೆಯಿಂದ ಆಗಮಿಸಿದ ದಾನಿಗಳು ದಾರಿ ಉದ್ದಕ್ಕೂ ಕಡ್ಲೇ ಗುಗ್ಗರಿ ಪಾನಕ ಮಜ್ಜಿಗೆ ಹಣ್ಣು ಹಂಪಲು ಲಘು ಉಪಹಾರಗಳನ್ನು ಭಕ್ತರಿಗೆ ವಿತರಣೆ ಮಾಡುತ್ತಿದ್ದರು.
ರಾಘವೇಂದ್ರ ರಾಜಕುಮಾರ್ ಭೇಟೆ :
ಡಾ.ರಾಜಕುಮಾರ್ ರವರ ಕುಟುಂಬ ಚಿತ್ರ ರಂಗಕ್ಕೆ ಬರಲು ಬೂದುಬಾಳು ವೆಂಕಟ ರಮಣ ಸ್ವಾಮಿ ಆಶೀರ್ವಾದವೇ ಕಾರಣ. ಇದು ನಮ್ಮ ಮನೆ ದೇವರು ನನ್ನ ಚಿಕ್ಕ ಮಗನ ಯುವ ಚಿತ್ರ ತೆರೆಯ ಮೇಲೆ ಬರುತ್ತಿದೆ. ಚಿತ್ರ ಉತ್ತಮವಾಗಿ ಮೂಡಿ ಬರಲೆಂದು ಭಗವಂತನಲ್ಲಿ ಪ್ರಾರ್ಥಿಸಿದ್ದೇನೆ ಎಂದು ರಾಘವೇಂದ್ರ ರಾಜಕುಮಾರ್ ಅವರು ಮಾತನಾಡುತ್ತಾ ಪ್ರತಿ ವರ್ಷದಂತೆ ಈ ಬಾರಿ ಜಾತ್ರೆಯಲ್ಲೂ ಬೂದುಬಾಳಪ್ಪನ ದರ್ಶನ ಪಡೆದು ಆಶೀರ್ವಾದ ಪಡೆಯಲು ಬಂದಿದ್ದೇನೆ. ನಮ್ಮ ಕುಟುಂಬದಿಂದ ಈ ಭಾಗಕ್ಕೆ ಏನಾದರೊಂದು ಉತ್ತಮ ಕೆಲಸ ಮಾಡಲು ಪ್ರೇರಣೆ ನೀಡುವಂತೆ ಭಗವಂತನಲ್ಲಿ ಕೇಳಿ ಕೊಂಡಿದ್ದೇನೆ. ನಾನು ಬದುಕಿರುವ ತನಕ ಪ್ರತಿ ವರ್ಷ ದೇವರ ದರ್ಶನಕ್ಕೆ ಬರುತ್ತೇನೆ ನಂತರ ನಮ್ಮ ಮಕ್ಕಳು ಕುಟುಂಬಸ್ಥರು ಅದನ್ನು ಮುಂದುವರಿಸಿಕೊಂಡು ಹೋಗುತ್ತಾರೆ ಎಂದು ತಿಳಿಸಿದರು.
ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹನೂರು ಪೆÇಲೀಸ್ ಠಾಣೆ ವೃತ್ತ ನಿರೀಕ್ಷ ಶಶಿಕುಮಾರ್ ಎಸ್.ಐ ರೆಹಾನಾ ಬೇಗಂ ಮತ್ತು ಸಿಬ್ಬಂಧಿ ವರ್ಗದವರು ಸೂಕ್ತ ಬಂದೋಬಸ್ತ್ ಜೊತೆಗೆ ವಾಹನ ನಿಲುಗಡೆಗೆ ಪ್ರತ್ಯೇಕ ಸ್ಥಳ ನಿಗಧಿ ಪಡಿಸಿ ಸಾರ್ವಜನಿಕರಿಗೆ ಉತ್ತಮ ಅವಕಾಶ ಕಲ್ಪಿಸಿದ್ದರು.
ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಭಕ್ತರು ಸಾರದಿ ಸಾಲಿನಲ್ಲಿ ನಿಂತ್ತು ದೇವರ ದರ್ಶನ ಪಡೆಯಲು ಉತ್ತಮ ಅವಕಾಶ ಕಲ್ಪಿಸಲಾಗಿತ್ತು.
ಭಕ್ತರು ಸರದಿ ಸಾಲಿನಲ್ಲಿ ನಿಂತ್ತು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.