ಚಿಕ್ಕ ಕುಟುಂಬದ ಆದರ್ಶ ಪಾಲಿಸಲು ಸಲಹೆ

oplus_131074


ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜೂ.೧೬; ಸುಖಕರ ಕುಟುಂಬ ನಿಮ್ಮದಾಗಲು ಅತ್ತೆ-ಸೊಸೆಯರು ಯೋಚಿಸಿ ನಿರ್ಧಾರಕ್ಕೆ ಬನ್ನಿ. ಚಿಕ್ಕ ಕುಟುಂಬದ ಆದರ್ಶಗಳನ್ನು ಪಾಲಿಸುವಂತೆ  ಚಿತ್ರದುರ್ಗ  ತಾಲ್ಲೂಕು  ಆರೋಗ್ಯ   ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಕರೆ ನೀಡಿದರು. ಇಲ್ಲಿನ ಬುದ್ಧನಗರದ ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯ ರಾಜೇಂದ್ರ ನಗರದ ಅಂಗನವಾಡಿ “ಎ’ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜನಸಂಖ್ಯೆ ಸ್ಥಿರತೆ ಕಾಪಾಡಲು ಕುಟುಂಬ ಕಲ್ಯಾಣ ಯೋಜನೆ ಯಶಸ್ವಿ ಅನುಷ್ಟಾನಕ್ಕಾಗಿ ಅತ್ತೆ ಸೊಸೆಯರ ಸಮಾಲೋಚನಾ ಸಭೆ ಉದ್ದೇಶಿಸಿ ಅವರು ಮಾತನಾಡಿದರು.ಜೂನ್ 07 ರಿಂದ ಜುಲೈ 07 ನೇ ರವರೆಗೆ ಜನಸಂಖ್ಯೆ ಸ್ಥಿರತೆ ಮಾಸಿಕವನ್ನು ಎರಡು ಪಾಕ್ಷಿಕದಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಸರ್ಕಾರದ ಮಾರ್ಗಸೂಚಿಯಂತೆ ನಡೆಸಲಾಗುತ್ತದೆ. ಜೂನ್ 07 ರಿಂದ ಜೂನ್ 20 ರ ತನಕ ದಂಪತಿ ಸಂಪರ್ಕ ಪಾಕ್ಷಿಕ ಇದರಲ್ಲಿ ಅರ್ಹ ದಂಪತಿಗಳ ಮನೆ ಮನೆ ಭೇಟಿ, ಆರೋಗ್ಯ ಇಲಾಖೆಯಲ್ಲಿ ದೊರೆಯುವ ಕುಟುಂಬ ಯೋಜನೆಗಳ ಪರಿಚಯ, ದಂಪತಿ ಸಂಪರ್ಕ ಸಭೆ, ತಾಯಂದಿರ ಸಭೆ, ಗುಂಪು ಸಭೆ ಮತ್ತು ಅತ್ತೆ-ಸೊಸೆಯೊಂದಿಗೆ ಸಮಾಲೋಚನಾ ಸಭೆಗಳನ್ನ ನಡೆಸಿ ಜನಸಂಖ್ಯೆ ಸ್ಥಿರತೆ ಶಿಕ್ಷಣ ನೀಡುವುದು, ಕುಟುಂಬ ಯೋಜನೆಗಳ ಅನುಷ್ಟಾನಕ್ಕೆ ಮನ ಒಲಿಸುವುದಾಗಿದೆ ಎಂದರು.
 ಜೂನ್ 20 ರಿಂದ ಜುಲೈ 07 ವಿಶ್ವ ಜನಸಂಖ್ಯೆ ದಿನದವರೆಗೆ ಸೇವಾ ಪಾಕ್ಷಿಕ ಕುಟುಂಬ ಯೋಜನೆ ಸೇವೆಗಳನ್ನು ಒದಗಿಸುವುದಾಗಿರುತ್ತದೆ. ಈ ದಿನದ ಅತ್ತೆ ಸೊಸೆಯರಲ್ಲಿ ಕೇಳಿಕೊಳ್ಳುವುದೇನೆಂದರೆ ಅಂತರದ ಹೆರಿಗೆ ಅಂದರೆ ಒಂದು ಮಗುವಿಗೂ ಎರಡನೇ ಮಗುವಿಗೂ ಕನಿಷ್ಠ 5 ವರ್ಷದ ಅಂತರವನ್ನು ಕಾಪಾಡಿಕೊಳ್ಳುವುದು. ಇದಕ್ಕಾಗಿ ಆರೋಗ್ಯ ಇಲಾಖೆಯಲ್ಲಿ ವಂಕಿ ಅಳವಡಿಕೆ, ನುಂಗುವ ಮಾತ್ರೆ, ನಿರೋಧ್ ಬಳಕೆ ಡಿಂಪಾ ಚುಚ್ಚು ಮದ್ದು, ಟುಬ್ಯಕ್ಟಮಿ, ಎನ್.ಎಸ್.ವಿ.ಶಸ್ತ್ರಚಿಕಿತ್ಸೆ ಸೇವೆಗಳು ಉಚಿತವಾಗಿ ಲಭ್ಯವಿದೆ. ಇವುಗಳ ಉಪಯೋಗ ಪಡೆದುಕೊಳ್ಳಿ ಎಂದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಕುಟುಂಬ ಯೋಜನೆಯಲ್ಲಿ ಪುರುಷರ ಸಹ-ಭಾಗಿತ್ವಕ್ಕಾಗಿ ಅತ್ತೆ ಸೊಸೆಯರು ಒಮ್ಮತದ ತೀರ್ಮಾನಕ್ಕೆ ಬನ್ನಿ. ಮಕ್ಕಳನ್ನು ನವಮಾಸ ಹೊಟ್ಟೆಯಲ್ಲಿ ತುಂಬಿಕೊಂಡು, ಹೆರಿಗೆನೋವನ್ನು ಸಹಿಸಿಕೊಂಡು, ಹಾಲುಣಿಸುವ ಜವಾಬ್ದಾರಿ ಪಡೆದು ನಂತರ ಮಕ್ಕಳ ಲಸಿಕೆ ಲಲನೆ ಪಾಲನೆ ಸಂಸಾರದ ಪೂರ್ಣಹೊರೆಯನ್ನು ಮಹಿಳೆಯರೇ ನಿಭಾಯಿಸುವಾಗ ಕುಟುಂಬ ಯೋಜನೆ ಅನುಷ್ಟಾನಕ್ಕೆ ಪುರುಷರು ಏಕೆ ಭಾಗವಹಿಸಬಾರದು. ಪುರುಷರಿಗಾಗಿ ಹೊಲಿಗೆ ಇಲ್ಲದ, ನೋವೇ ಇಲ್ಲದ ಪುರುಷತ್ವಕ್ಕೆ ಯಾವುದೇ ತೊಂದರೆ ಇಲ್ಲದ ನೋ ಸ್ಕಾಲ್ ಪೆಲ್ ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಅತ್ತೆಸೊಸೆಯರು ಮನೆಯಲ್ಲಿ ಒಟ್ಟಿಗೆ ಕುಳಿತು ತೀರ್ಮಾನ ಕೈಗೊಳ್ಳಿ ಆಗ ನಿಮ್ಮ ಕುಟುಂಬ ಸುಖಿ ಕುಟುಂಬ ವಾಗುತ್ತದೆ ಎಂದರು.ಮುಖ್ಯ ಆರೋಗ್ಯ ಮೇಲ್ವಿಚಾರಣಾಧಿಕಾರಿ ಎಮ್.ಬಿ.ಹನುಮಂತಪ್ಪ, ಹಿರಿಯ ಆರೋಗ್ಯ ಸುರಕ್ಷತಾಧಿಕಾರಿ ಕಾತ್ಯಾಣಮ್ಮ ವಿವಿಧ ಕುಟುಂಬ ಯೋಜನೆಗಳ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಆರೋಗ್ಯ ಸುರಕ್ಷತಾಧಿಕಾರಿಗಳಾದ ಉಷಾ, ಏಕಾಂತಮ್ಮ ಗೀತಾ, ಅಂಗನವಾಡಿ ಕಾರ್ಯಕರ್ತೆ ಶಶಿಕಲಾ, ಮೀನಾಕ್ಷಿ, ಆಶಾ ಕಾರ್ಯಕರ್ತೆಯರು ಅತ್ತೆ ಸೊಸೆಯರು ಭಾಗವಹಿಸಿದ್ದರು. 10 ಜನ ಅತ್ತೆ-ಸೊಸೆಯರಲ್ಲಿ 4 ಜನ ಕುಟುಂಬ ಯೋಜನೆ ಅನುಸರಿಸಲು ಮುಂದೆ ಬಂದರು.