
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.01:- ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರು ಜಿಲ್ಲೆಯ ಚಿಕ್ಕಾಟಿ ಸರ್ಕಾರಿ ಪ್ರೌಢಶಾಲೆಗೆ ಸೋಮವಾರ ಭೇಟಿ ಮಾಡಿ, ಶಾಲೆಯ ಕುಂದುಕೊರತೆಗಳನ್ನು ಪರಿಶೀಲನೆ ಜೊತೆಗೆ ಶಿಕ್ಷಕರ ಸಮಸ್ಯೆಗಳನ್ನು ಆಲಿಸಿದರು.
ಶಾಲೆಗೆ ತೆರಳಿದ ಶಾಸಕರು ಅಲ್ಲಿನ ಮೂಲಭೂತ ಸೌಲಭ್ಯಗಳು ಹಾಗೂ ಮಕ್ಕಳ ಕಲಿಕೆ ಶಿಕ್ಷಕರ ಕೊರತೆ ಬಗ್ಗೆ ಮುಖ್ಯ ಶಿಕ್ಷಕರಿಂದ ಮಾಹಿತಿ ಪಡೆದುಕೊಂಡರು. ಅಲ್ಲಿಂದ ತರಗತಿಗಳಿಗೆ ತೆರಳಿ ಮಕ್ಕಳ ಹಾಜರಾತಿ ಸಂಖ್ಯೆಯ ಮತ್ತು ಕಲಿಕೆ ಬಗ್ಗೆ ವಿವರಣೆ ಪಡೆದುಕೊಂಡರು.
ರಾಜ್ಯದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಅನುದಾನವನ್ನು ನೀಡುವ ಜೊತೆಗೆ ಕಲಿಕೆಗೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗುತ್ತಿದೆ. ಪ್ರೌಢ ಶಿಕ್ಷಣ ಸಚಿವರು ಸಹ ಸಕ್ರಿಯವಾಗಿ ಇಲಾಖೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಶಿಕ್ಷಕರ ಕುಂದುಕೊರತೆಗಳ ಬಗ್ಗೆ ಗಮನ ಹರಿಸುತ್ತಿದ್ದಾರೆ. ಶಿಕ್ಷಕ ವೃಂದವರು ಸಹ ಗಡಿ ಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಅದ್ಯತೆ ನೀಡಬೇಕು. ಶಾಲೆಗೆ ಅತ್ಯವಶ್ಯಕವಾದ ಮೂಲಸೌಲಭ್ಯ ಬಗ್ಗೆ ಮನವಿ ನೀಡಿದರೆ, ಅದನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾಧ ಕಮರಹಳ್ಳಿ ಕುಮಾರ್, ಬಳ್ಳಾರಿ ಗೌಡರು, ಷಡಕ್ಷರಿ, ಚಿಕ್ಕಾಟಿ ಪ್ರೌಢಶಾಲೆಯ ಮುಖ್ಯಶಿಕ್ಷಕ ನಾಗೇಂದ್ರ, ಗುರು ಮೊದಲಾಧವರು ಇದ್ದರು.
ಸೋಮಳ್ಳಿ ಶ್ರೀಗಳ ಭೇಟಿ: ಬಳಿಕ ಸೋಮಹಳ್ಳಿ ವೀರ ಸಿಂಹಾಸನ ಶಿಲಾ ಮಠಕ್ಕೆ ಭೇಟಿ ನೀಡಿ, ಶ್ರೀ ಮಠದ ಅಧ್ಯಕ್ಷರಾದ ಶ್ರೀಸಿದ್ದಮಲ್ಲಪ್ಪ ಸ್ವಾಮಿಗಳ ಆರೋಗ್ಯವನ್ನು ವಿಚಾರಿಸಿದರು. ಶಾಲು ಹೊದಿಸಿ, ಫಲತಾಂಬಲು ನೀಡಿ ಆಶೀರ್ವಾದ ಪಡೆದುಕೊಂಡರು. ಶ್ರೀಮಠದ ಪ್ರಗತಿ, ಶ್ರೀಮಠದ ವಿದ್ಯಾಸಂಸ್ಥೆಗಳ ನಿರ್ವಹಣೆ ಮತ್ತು ಶ್ರೀಮಠದ ಕಾರ್ಯಕಲಾಪಗಳ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಗೌರಿಶಂಕರ್, ಮುಖ್ಯ ಶಿಕ್ಷಕರಾದ ರಂಗಸ್ವಾಮಿ, ಮಹದೇವಸ್ವಾಮಿ, ಸಹ ಶಿಕ್ಷಕ ವೃಂದವರು, ಭಕ್ತರು ಇದ್ದರು.