ಚಿಕ್ಕಮ್ಮ ಹತ್ಯೆ ಯತ್ನ ಅಳಿಯ-ಮಗಳು ಸೆರೆ

ಬೆಂಗಳೂರು,ಮಾ.೨೯- ಕ್ರೂರಿ ಮಗಳೊಬ್ಬಳು ತನ್ನ ಪತಿ ಜತೆ ಸೇರಿ ಹಣದಾಸೆಗೆ ಚಿಕ್ಕಮ್ಮನ ಜೀವವನ್ನೇ ತೆಗೆಯಲು ಮುಂದಾದ ಅಮಾನವೀಯ ಘಟನೆ ಆರ್‌ಎಂಸಿ ಯಾರ್ಡ್ ನಲ್ಲಿ ನಡೆದಿದೆ.
ಅಣ್ಣಮ್ಮ ಅವರ ಅಕ್ಕನ ಮಗಳು ಸುಚಿತ್ರ ಹಾಗೂ ಅಳಿಯ ಮುನಿರಾಜು ಎಂಬುವವರಿಂದ ಈ ಕೃತ್ಯ ನಡೆದಿದ್ದು ಇವರಿಬ್ಬರೂ ಪೊಲೀಸರ ಅತಿಥಿಯಾಗಿದ್ದಾರೆ. ಅಣ್ಣಮ್ಮ ಆರ್‌ಎಂಸಿ ಯಾರ್ಡ್ ನಲ್ಲಿ ಮನೆ ಮಾಡಿಕೊಂಡಿದ್ದು,ಮಕ್ಕಳಿಲ್ಲದಿದ್ದರೂ ಮನೆ ಮಾಡಿಕೊಂಡು ಉತ್ತಮ ಜೀವನ ಸಾಗಿಸುತ್ತಿದ್ದರು. ಒಂದಷ್ಟು ಮನೆಗಳನ್ನು ಬಾಡಿಗೆ ಬಿಟ್ಟು ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದರು. ಬ್ಯಾಂಕ್ ವ್ಯವಹಾರ ತಿಳಿಯದ ಕಾರಣಕ್ಕೆ ಹಣ,ಚಿನ್ನಾಭರಣವನ್ನೆಲ್ಲ ಮನೆಯಲ್ಲೇ ಇಡುತ್ತಿದ್ದರು.
ಅಣ್ಣಮ್ಮರ ಅಕ್ಕನ ಮಗಳು ಸುಚಿತ್ರ ಆಗಾಗ ಮನೆಗೆ ಬಂದು ಹೋಗುತ್ತಾ ಚಿಕ್ಕಮ್ಮನ ಮನೆಯಲ್ಲಿದ್ದ ಹಣ ಹಾಗೂ ಚಿನ್ನಾಭರಣದ ಮೇಲೆ ಕಣ್ಣಿಟ್ಟಿದ್ದಳು. ಹೀಗಾಗಿ ಸುಚಿತ್ರ ತನ್ನ ಎರಡನೇ ಪತಿ ಮುನಿರಾಜು ಜತೆ ಸೇರಿ ಕೊಲೆಗೆ ಸಂಚು ಮಾಡಿದ್ದಳು.
ಅಜ್ಜಿಯ ಜೀವ ಉಳಿಸಿದ್ದ:
ಈ ಹಿಂದೆಯೇ ಖತರ್ನಾಕ್ ದಂಪತಿ ಒಮ್ಮೆ ಮನೆಯಲ್ಲಿ ಅಣ್ಣಮ್ಮನ ಕೊಲೆಗೆ ಯತ್ನಿಸಿದ್ದರು. ಕಳೆದ ಕೆಲ ದಿನಗಳ ಹಿಂದೆ ಅಣ್ಣಮ್ಮ ಮಲಗಿದ್ದಾಗಲೇ ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಲು ಮುಂದಾಗಿದ್ದರು. ಇನ್ನೇನು ಕೊಲ್ಲಬೇಕು ಎಂದಾಗ ಸುಚಿತ್ರಾಳ ಮಗ (೧೫) ಅಜ್ಜಿ ಜಿರಳೆ ಬಂತು ಎಂದು ಕೂಗಿ ಎಚ್ಚರಿಸಿದ್ದ. ಹೀಗಾಗಿ ಮೊದಲ ಸಂಚು ವಿಫಲವಾಗಿತ್ತು.
ಈ ಘಟನೆ ಬಳಿಕ ಸ್ವಲ್ಪ ಸಮಯ ಸುಮ್ಮನಿದ್ದ ಮುನಿರಾಜು ಹಾಗೂ ಸುಚಿತ್ರಾ, ಕಳೆದ ವಾರ ಮತ್ತೆ ಕೊಲೆಗೆ ಯತ್ನಿಸಿದ್ದರು. ರಾತ್ರಿ ನೆಪವೊಡ್ಡಿ ಗೊರಗುಂಟೆ ಪಾಳ್ಯದ ಸ್ಮಶಾನದ ಬಳಿ ಚಿಕ್ಕಮ್ಮಳನ್ನು ಕರೆಸಿಕೊಂಡಿದ್ದಳು. ಇತ್ತ ದೂರಿದಲ್ಲಿದ್ದ ಮುನಿರಾಜು, ಅಣ್ಣಮ್ಮ ಬರುತ್ತಿದ್ದಂತೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲು ಮುಂದಾಗಿದ್ದ. ಏಕಾಏಕಿ ದಾಳಿ ಮಾಡಿ ತೀವ್ರವಾಗಿ ಹಲ್ಲೆ ಮಾಡಿದ್ದ.
ಪತಿ ಜತೆಗೆ ಪರಾರಿ:
ಅಳಿಯನ ಹಲ್ಲೆಯಿಂದ ಅಣ್ಣಮ್ಮ ಕುಸಿದು ಬಿದ್ದಿದ್ದರು. ಇತ್ತ ಮಗಳು ಸುಮಿತ್ರಾ ಚಿಕ್ಕಮ್ಮನ ಬಳಿ ಇದ್ದ ಚಿನ್ನಾಭರಣ ಹಾಗೂ ಹಣವನ್ನೆಲ್ಲ ಕಿತ್ತುಕೊಂಡು ಪತಿ ಜತೆಗೆ ಪರಾರಿ ಆಗಿದ್ದಳು.
ಚಿಕ್ಕಮ್ಮ ಸತ್ತಿದ್ದಾಳೆಂದು ಎಂದುಕೊಂಡ ಸುಚಿತ್ರಾ ಹಾಗೂ ಮುನಿರಾಜು ನೆಮ್ಮದಿಯಿಂದ ಧರ್ಮಸ್ಥಳಕ್ಕೆ ಹೋಗಿದ್ದರು. ಆದರೆ ಹಲ್ಲೆಗೊಳಾಗಿ ನರಳಾಡು
ತ್ತಿದ್ದ ಅಣ್ಣಮ್ಮ ಜೋರಾಗಿ ಕಿರುಚಾಡಿ ದ್ದಾರೆ. ಇದನ್ನೂ ಕಂಡ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಅದೃಷ್ಟವಶಾತ್ ಅಣ್ಣಮ್ಮ ಪ್ರಾಣಾಪಾಯದಿಂದ ಪಾರಾಗಿದ್ದರು.
ಇಬ್ಬರು ಬಂಧನ:
ಇತ್ತ ಚಿಕ್ಕಮ್ಮ ಬದುಕಿರುವ ವಿಚಾರ ತಿಳಿದ ಈ ಖತರ್ನಾಕ್ ದಂಪತಿ ಮತ್ತೆ ನಗರಕ್ಕೆ ಬಂದು ಪೊಲೀಸರ ಕಣ್ತಪ್ಪಿಸಿ ಹಾಸನ, ಸಕೇಲಶಪುರದ ಸುತ್ತಮುತ್ತ ಸುತ್ತಾಡುತ್ತಿದ್ದರು. ತಾನೊಂದು ಬಗೆದರೆ ದೈವವೊಂದು ಬಗೆದಂತೆ ಎಂಬ ಮಾತಿನಂತೆ ಖತರ್ನಾಕ್ ದಂಪತಿ ಜೈಲುಪಾಲಾಗಿದ್ದಾರೆ. ಆರ್‌ಎಂಸಿ ಯಾರ್ಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ, ವಿಚಾರಣೆಯನ್ನು ನಡೆಸುತ್ತಿದ್ದಾರೆ.