ಚಿಕ್ಕಮಧುರೆಯಲ್ಲಿ ಕನ್ನಡ ಸೇವಾ ರತ್ನ ಪ್ರಶಸ್ತಿ ಪ್ರದಾನ

ಬೆಂಗಳೂರು, ಮಾ. ೨೪- “ಒಂದು ಕಾಲದಲ್ಲಿ ಕನ್ನಡಕ್ಕೆ ಎಲ್ಲಾ ಕಡೆಯಿಂದ ಆಪತ್ತು ಎದುರಾಗಿತ್ತು. ಅನೇಕ ಹೋರಾಟಗಾರರ ಹೋರಾಟದ ಫಲವಾಗಿ ಇಂದು ಅಂತಹ ಯಾವ ಅಪಾಯವೂ ಇಲ್ಲ. ಇಲ್ಲಿನ ರೀತಿ ನೀತಿಗೆ ಹೊಂದಿಕೊಂಡರೆ ನಾವು ಎಲ್ಲರನ್ನೂ ಅಪ್ಪಿಕೊಳ್ಳುತ್ತೇವೆ. ನಮ್ಮ ಮೇಲೆ ಸವಾರಿ ಮಾಡಲು ಬಂದರೆ ನಾವು ಬುದ್ಧಿ ಕಲಿಸುತ್ತೇವೆ” ಎಂದು ಶ್ರೀಕ್ಷೇತ್ರ ಚಿಕ್ಕ ಮಧುರೆಯ ಶ್ರೀ ಶನಿಮಹಾತ್ಮಸ್ವಾಮಿ ದೇವಾಲಯ ಕಾರ್ಯದರ್ಶಿ ಸಿ.ಡಿ. ಸತ್ಯನಾರಾಯಣ ಗೌಡ ಅವರು ತಿಳಿಸಿದರು.

ವಿವಿಧ ಕ್ಷೇತ್ರದ ಸಾಧಕರಿಗೆ ಕನ್ನಡ ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಸಾಪ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಮಾಯಣ್ಣರವರು ಮಾತನಾಡಿ “ಪ್ರತಿ ಹೋಬಳಿಯಲ್ಲಿಯೂ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ, ಕನ್ನಡ ಸಾಹಿತ್ಯವನ್ನು ಜನರಿಗೆ ಮುಟ್ಟಿಸುವ ಯುವಕರ ತಂಡಗಳು ಹುಟ್ಟಿಕೊಳ್ಳಬೇಕಾಗಿದೆ. ಪಂಥಗಳನ್ನು ಮೀರಿ ಕನ್ನಡವನ್ನು ಬೆಳೆಸುವ ಕೆಲಸವಾಗ ಬೇಕು ಎಂದು.
ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಕೆ. ವಿ. ಪ್ರಕಾಶ್ ಮಾತನಾಡಿ “ಸಾಧಕರಿಗೆ ಸನ್ಮಾನಿಸುವ ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಲಿ” ಎಂದು ಆಶಿಸಿದರು. ಜಿ ರಮೇಶ್ ಅವರು ಸ್ವಾಗತ ಕೋರಿದರು. ಹಂಸವೇಣಿಯವರು ಭರತನಾಟ್ಯ ನೃತ್ಯ ಪ್ರದರ್ಶಿಸಿದರು. ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.