ಚಿಕ್ಕಬೂದೂರಿನಲ್ಲಿ ಕುಡಿವ ನೀರಿನ ಸಮಸ್ಯೆ

??????

ಬಾಬುಅಲಿ ಕರಿಗುಡ್ಡ
ದೇವದುರ್ಗ.ಡಿ.೨೧- ತಾಲೂಕಿನ ಜೇರಬಂಡಿ ಗ್ರಾ.ಪಂ. ವ್ಯಾಪ್ತಿಯ ಚಿಕ್ಕಬೂದೂರು ಗ್ರಾಮದಲ್ಲಿ ಬೇಸಿಗೆ ಮುನ್ನವೇ ಕುಡಿವ ನೀರಿಗೆ ಹಾಹಾಕಾರ ಎದ್ದಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.
ವರ್ಷವಿಡಿ ತುಂಬಿಹರಿಯುವ ಕೃಷ್ಣಾನದಿ ಪಕ್ಕದಲ್ಲಿದ್ದರೂ ಗ್ರಾಮಸ್ಥರ ದಾಹ ನೀಗಿಲ್ಲ. ಕುಡಿವ ನೀರಿನ ಸಮಸ್ಯೆಯಾದಗಲೆಲ್ಲ ಅಧಿಕಾರಿಗಳು ತಾತ್ಕಾಲಿಕ ವ್ಯವಸ್ಥೆ ಮಾಡಿಕೈತೊಳೆದುಕೊಳ್ಳುತ್ತಾರೆ. ಗ್ರಾಮದಲ್ಲಿ ಎಲ್ಲೇ ಬೋರ್‌ವೆಲ್ ಕೊರೆದರೂ ಉಪ್ಪುನೀರು ಬರುತ್ತಿದ್ದು, ಶುದ್ಧ ನೀರು ಮರೀಚಿಕೆಯಾಗಿದೆ.
ಶಾಶ್ವತ ಕುಡಿವ ನೀರಿನ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಹಲವು ಸಲ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪರಿಹಾರ ಮಾತ್ರ ಸಿಕ್ಕಿಲ್ಲ. ಗ್ರಾಮದ ಹೊರವಲಯದಲ್ಲಿ ನಿರ್ಮಿಸಿದ ನೀರಿನ ತೊಟ್ಟಿ (ಹೇರ್ ಟ್ಯಾಂಕ್) ಹನಿನೀರು ಕಾಣದೆ ಪಾಳುಬಿದ್ದಿದ್ದು, ಬೀಳುವ ಸ್ಥಿತಿಗೆ ಬಂದಿದೆ.
ರಾಜೀವ್‌ಗಾಂಧಿ ಬಹುಗ್ರಾಮ ಕುಡಿವ ನೀರಿನ ಯೋಜನೆಯಡಿ ಮನೆಮನೆಗೆ ನೀರು ತಲುಪಿಸಲು ನಿರ್ಮಿಸಿದ ಸಿಂಕ್‌ಗೆ ನೀರು ಬರುತ್ತಿದೆ. ಅದೇ ನೀರನ್ನು ಗ್ರಾಮಸ್ಥರು ಮೇಲಿಂದ ಕೊಡ ಇಳಿಬಿಟ್ಟು ನೀರು ತುಂಬಿಕೊಳ್ಳುತ್ತಿದ್ದಾರೆ. ಯಾಟಗಲ್‌ನಲ್ಲಿ ನಿರ್ಮಿಸಿ ಬಹುಗ್ರಾಮ ಗ್ರಾಮ ಕುಡಿವ ನೀರಿನ ಯೋಜನೆ ಹಳ್ಳಹಿಡಿದ ಕಾರಣ ಗ್ರಾಮಕ್ಕೆ ನೀರಿನ ಸಮಸ್ಯೆ ಉಂಟಾಗಿದೆ.
ಜೇರಬಂಡಿಯ ಬೋರ್‌ವೆಲ್‌ನಿಂದ ನೀರು ಪೂರೈಕೆ ಮಾಡಲಾಗುತ್ತಿದ್ದು, ಆ ನೀರೂ ಸಿಂಕ್‌ಗೆ ಬಂದು ಸಂಗ್ರಹವಾಗುತ್ತಿದೆ. ನೀರಿಗೆ ಒಂದೇ ಮೂಲ ಇರುವ ಕಾರಣ ಗ್ರಾಮಸ್ಥರು ನೀರು ಹಿಡಿಯಲು ಸರದಿಸಾಲು ನಿಲ್ಲುವ ಸ್ಥಿತಿಯಿದೆ. ಸುತ್ತಲೂ ನೀರಾವರಿ ಪ್ರದೇಶವಿದ್ದರೂ ಗ್ರಾಮಸ್ಥರು ನೀರಿಗಾಗಿ ಪರಿತಪಿಸುತ್ತಿರುವುದು ವಿಪರ್ಯಾಸ.
ಆರ್‌ಒ ಪ್ಲಾಂಟ್ ವ್ಯರ್ಥ:
ಗ್ರಾಮಸ್ಥರಿಗೆ ಶುದ್ಧ ಕುಡಿವ ನೀರು ಒದಗಿಸುವ ದೃಷ್ಟಿಯಿಂದ ಏಳು ವರ್ಷದ ಹಿಂದೆ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಆರ್‌ಒ ಪ್ಲಾಂಟ್ ನಿರ್ವಹಣೆ ಕೊರತೆ ಹಾಗೂ ನೀರಿನ ಮೂಲವಿಲ್ಲದೆ ಪಾಳುಬಿದ್ದಿದೆ. ಗ್ರಾಮದಲ್ಲಿ ೪ಗ್ರಾಪಂ ಸ್ಥಾನಗಳಿದ್ದು, ೧೪೦೦ಮತದಾರರು, ೧೭೦೦ಜನಸಂಖ್ಯೆಯಿದೆ. ಗ್ರಾಪಂ ಚುನಾವಣೆಗೆ ಕುಡಿವ ನೀರಿನ ವಿಷಯವೇ ಮುಖ್ಯವಾಗಿದೆ. ಆರ್‌ಒ ಪ್ಲಾಂಟ್ ಬಂದ್‌ಆಗಿ ಹಲವು ವರ್ಷ ಕಳೆದಿದ್ದು, ಲಕ್ಷಾಂತರ ರೂ. ಮೌಲ್ಯದ ಯಂತ್ರಗಳು ತುಕ್ಕುಹಿಡಿದಿವೆ. ಅದರ ಸುತ್ತಲೂ ಜಾಲಿಬೆಳೆದು ಸಂಪೂರ್ಣ ಹಾಳಾಗಿದೆ. ಗ್ರಾಮದ ಎಸ್ಸಿ, ಎಸ್ಟಿ, ಓಣಿ, ಹಳೇ ಶಾಲೆ, ಹಗಸಿ ಮುಂದೆ ನಿರ್ಮಿಸಿದ ನೀರಿನ ತೊಟ್ಟಿಗಳು ಪಾಳುಬಿದ್ದಿವೆ.

ಕೋಟ್=======

ಚಿಕ್ಕಬೂದೂರಿನ ಕುಡಿವ ನೀರಿನ ಸಮಸ್ಯೆ ಬಗ್ಗೆ ಗಮನಕ್ಕಿದೆ. ಸದ್ಯ ಜೇರಬಂಡಿ ಬೋರ್‌ವೆಲ್‌ನಿಂದ ಕುಡಿವ ನೀರು ಪೂರೈಕೆ ಮಾಡಲಾಗುತ್ತಿದೆ. ಬಹುಗ್ರಾಮ ಕುಡಿವ ನೀರಿನ ಯೋಜನೆ ಸಮಸ್ಯೆಯಾದ ಕಾರಣ ಮನೆಮನೆಗೆ ನೀರು ತಲುಪಿಸುವುದು ಬಂದ್‌ಆಗಿದೆ. ಈ ಬಗ್ಗೆ ಪಿಡಿಒಗೆ ಸೂಚನೆ ನೀಡುವೆ.

| ಪಂಪಾಪತಿ ಹಿರೇಮಠ

ತಾಪಂ ಇಒ

೨೧-ಡಿವಿಡಿ-೧

೨೧-ಡಿವಿಡಿ-೨