ಚಿಕ್ಕಬಳ್ಳಾರಿ ನವಗ್ರಾಮದಲ್ಲಿ ಬಟ್ಟೆಯಲ್ಲಿ ಸೋಸಿ ನೀರು ಕುಡಿಯುವ ಗ್ರಾಮಸ್ಥರು


ಜಾಲಿಹಾಳ್ ರಾಜಾಸಾಬ್
ಸಿರುಗುಪ್ಪ, ಮೇ.11: ತಾಲೂಕಿನ ಚಿಕ್ಕಬಳ್ಳಾರಿ ನವ ಗ್ರಾಮದಲ್ಲಿರುವ ಜನರಿಗೆ ಶುದ್ಧ ಕುಡಿಯುವ ನೀರೊದಗಿಸುವ ಉದ್ದೇಶದಿಂದ ನಿರ್ಮಿಸಲಾದ ಕುಡಿಯುವ ನೀರಿನ ಕೆರೆಯಲ್ಲಿ ನೀರು ಸಂಗ್ರಹಿಸದೆ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ದಿಂದಾಗಿ ಇಲ್ಲಿನ ಗ್ರಾಮದ ಜನರು ಶುದ್ಧ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸುಮಾರು 250-300 ಕುಟುಂಬಗಳು ನವಗ್ರಾಮದಲ್ಲಿ ವಾಸಮಾಡುತ್ತಿದ್ದು, ನವಗ್ರಾಮದ ನಿವಾಸಿಗಳಿಗೆ ವರ್ಷದ 12 ತಿಂಗಳು ಶುದ್ಧ ಕುಡಿಯುವ ನೀರು ಒದಗಿಸಬೇಕು ಎನ್ನುವ ಉದ್ದೇಶದಿಂದ ಸುಮಾರು 10ವರ್ಷಗಳ ಹಿಂದೆ ರೂ.1ಕೋಟಿ ಹಣವನ್ನು ವೆಚ್ಚಮಾಡಿ ಕುಡಿಯುವ ನೀರಿನ ಕೆರೆಯನ್ನು ನಿರ್ಮಾಣ ಮಾಡಲಾಗಿದೆ.
ಆದರೆ ಅಧಿಕಾರಿಗಳು ತುಂಗಭದ್ರ ನದಿಯಲ್ಲಿ ನೀರು ಬತ್ತುವ ಮುನ್ನವೆ ಈ ಕೆರೆಗೆ ನೀರು ತುಂಬಿಸುವ ಕೆಲಸವನ್ನು ಮಾಡಬೇಕಾಗಿದೆ, ಆದರೆ ನದಿಯಲ್ಲಿ ನೀರು ಬತ್ತಿ ಹೋಗಿದ್ದು, ತಗ್ಗುದಿನ್ನೆಗಳಲ್ಲಿ ನಿಂತಿರುವ ನೀರನ್ನು ಕೆರೆಗೆ ನೇರವಾಗಿ ಹರಿಸಲಾಗುತ್ತಿದೆ, ಆದರೆ ಕೆರೆಯಲ್ಲಿ ನೀರನ್ನು ಶುದ್ಧೀಕರಿಸಿದ ನಂತರ ಸಾರ್ವಜನಿಕರ ನಲ್ಲಿಗಳಿಗೆ ಪೂರೈಕೆ ಮಾಡಬೇಕು, ಆದರೆ ನದಿಯಿಂದ ನೇರವಾಗಿ ಹರಿಸಲಾದ ನೀರನ್ನು ಸಾರ್ವಜನಿಕರಿಗೆ ಪೂರೈಕೆ ಮಾಡಲಾಗುತ್ತಿದೆ, ಇದೇ ನೀರನ್ನು ಜನರು ತಮ್ಮ ಮನೆಯಲ್ಲಿ ಬಟ್ಟೆಯಲ್ಲಿ ಸೋಸಿ ಕುಡಿಯುವ ದುಸ್ಥಿತಿ ನಿರ್ಮಾಣವಾಗಿದೆ.
ಸಾಮಾನ್ಯ ದಿನಗಳಲ್ಲಿಯೇ ಕೆರೆಗೆ ನೀರನ್ನು ತುಂಬಿಸದ ಅಧಿಕಾರಿಗಳು ಕೇವಲ ಈಗ ಬೇಸಿಗೆ ಕಾಲ ಪ್ರಾರಂಭವಾಗಿದ್ದು, ಕಾಟಾಚಾರಕ್ಕೆ ಎನ್ನುವಂತೆ ಪ್ರತಿನಿತ್ಯ ನದಿಯಲ್ಲಿ ಒಡ್ಡು ಹಾಕಿ ನಿಲ್ಲಿಸಲಾದ ನೀರನ್ನು ಕೆರೆಗೆ ಬಿಡುತ್ತಿದ್ದಾರೆ. ಆದರೆ ಕುಡಿಯಲು ಮತ್ತು ಬಳಕೆ ಮಾಡಲು ಯಾವುದೇ ನೀರಿನ ಮೂಲವಿಲ್ಲದೆ ಕೆರೆಯ ನೀರನ್ನೇ ಇಲ್ಲಿನ ಜನರು ಬಳಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.
ಕೆರೆಯ ನೀರು ಶುದ್ಧೀಕರಿಸಿ ಗ್ರಾಮಸ್ಥರಿಗೆ ಪೂರೈಕೆ ಮಾಡಬೇಕು, ಆದರೆ ಶುದ್ಧೀಕರಿಸದೇ ನೀರನ್ನು ಪೂರೈಕೆ ಮಾಡುತ್ತಿದ್ದಾರೆ. ಕಲುಷಿತ ನೀರನ್ನು ನಾವು ಬಟ್ಟೆಯಲ್ಲಿ ಸೋಸಿ ಕುಡಿಯಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ನಮ್ಮ ಕುಡಿಯುವ ನೀರಿನ ಸಮಸ್ಯೆಯನ್ನು ಅಧಿಕಾರಿಗಳು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಇದರಿಂದಾಗಿ ಅಧಿಕಾರಿಗಳು ಬಿಟ್ಟ ನೀರನ್ನೇ ತೀರ್ಥ ಎನ್ನುವಂತೆ ಬಳಕೆ ಮಾಡುತ್ತಿದ್ದೇವೆಂದು ಇಲ್ಲಿನ ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇಲ್ಲಿರುವ ಸರ್ಕಾರಿ ಶುದ್ಧ ಕುಡಿಯುವ ನೀರಿನ ಘಟಕವು ಆಗಾಗ ರಿಪೇರಿಗೆ ಬರುತ್ತಿದೆ, ಯಾವಾಗ ಕೈಕೊಡುತ್ತದೋ, ಯಾವಾಗ ಕಾರ್ಯ ನಿರ್ವಹಿಸುತ್ತದೋ ಗೊತ್ತಿಲ್ಲ, ಇದರಿಂದಾಗಿ ನಮಗೆ ಕೆರೆಯ ನೀರೆ ಕುಡಿಯಲು ಅನಿವಾರ್ಯವಾಗಿದೆ ಎಂದು ಗ್ರಾಮಸ್ಥ ದುರುಗಪ್ಪ ತಿಳಿಸಿದ್ದಾರೆ.
ಕೆರೆಗೆ ನೀರು ತುಂಬಿಸುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ, ಗ್ರಾಮಸ್ಥರ ನೀರಿನ ಸಮಸ್ಯೆ ಪರಿಹರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದೆಂದು ತಾ.ಪಂ. ಇ.ಒ. ಎಂ.ಬಸಪ್ಪ ತಿಳಿಸಿದ್ದಾರೆ.