
ಚಿಕ್ಕಬಳ್ಳಾಪುರ, ಸೆಪ್ಟೆಂಬರ್-01:ವೈದ್ಯಕೀಯ ಶಿಕ್ಷಣ ಹಾಗು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಆರ್ ಪಾಟೀಲ ಅವರೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್ ಅವರು ಚಿಕ್ಕಬಳ್ಳಾಪುರ ತಾಲ್ಲೂಕಿನ ವಿವಿಧ ಕಾಮಗಾರಿಗಳನ್ನು ಶುಕ್ರವಾರ ಪರಿಶೀಲಿಸಿದರು.
ಸಚಿವದ್ವಯರು ಇಂದು ಮೊದಲಿಗೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಅಂಗಟ್ಟ ಗ್ರಾಮದ ಬಳಿ 14.9 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸರ್.ಎಂ.ವಿಶ್ವೇಶ್ವರಯ್ಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಪಾರ್ ಸೂಪರ್ ಟ್ರೈನರ್ಸ್ ಸಂಸ್ಥೆಯ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿ ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ನಂತರ ಮುದ್ದೇನಹಳ್ಳಿ ಬಳಿ ಇರುವ ಸರ್.ಎಂ.ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದಲ್ಲಿ ತಾತ್ಕಾಲಿಕವಾಗಿ ಚಿಕ್ಕಬಳ್ಳಾಪುರ ವೈದ್ಯಕೀಯ ವಿಜ್ಞಾನ ಕಾಲೇಜಿಗೆ ಭೇಟಿ ನೀಡಿ, ಪರಿಶೀಲಿಸಿದರು. ಅಲ್ಲಿಂದ ನೇರವಾಗಿ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಸಮಾಧಿಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿ ಗೌರವ ಸಲ್ಲಿಸಿದರು. ನಂತರ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವೈದ್ಯಕೀಯ ಸೇವೆಗಳ ಕುರಿತು ಪ್ರಗತಿ ಪರಿಶೀಲಿಸಿದರು. ಕೊನೆಯದಾಗಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಅರೂರು ಬಳಿ ನಿರ್ಮಾಣವಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನ ಕಟ್ಟಡಗಳ ಬಗ್ಗೆ ಪರಿಶೀಲಿಸಿ ನೂತನ ಕಟ್ಟಡದಲ್ಲಿ ಚಿಕ್ಕಬಳ್ಳಾಪುರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯನ್ನು ಪೂರ್ಣಕಾಲಿಕವಾಗಿ ಆರಂಭಿಸುವ ಬಗ್ಗೆ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ವೇಳೆ ಸುದ್ದಿಗಾರರೊಂದಿಗೆ ವೈದ್ಯಕೀಯ ಸಚಿವ ಡಾ. ಶರಣ ಪ್ರಕಾಶ ಆರ್ ಪಾಟೀಲ ಅವರು ಮಾತನಾಡಿ,ಮುದ್ದೇನಹಳ್ಳಿಯ VTU ಕ್ಯಾಂಪಸ್ ನಲ್ಲಿ ತಾತ್ಕಾಲಿಕವಾಗಿ ನಡೆಯುತ್ತಿರುವುದರಿಂದ ಸರ್ಕಾರಿ ವೈದ್ಯಕೀಯ ಕಾಲೇಜಿನ ಕಲಿಕಾ ಪ್ರಕ್ರಿಯೆಗಳನ್ನು ಸೆಪ್ಟೆಂಬರ್ 15ಕ್ಕೆ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮ ದಿನದಂದು ಅರೂರ್ ಬಳಿ ನಿರ್ಮಾಣವಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನ ನೂತನ ಕಟ್ಟಡಕ್ಕೆ ವರ್ಗಾಯಿಸಲಾಗುತ್ತದೆ. ಕಳೆದ ಎರಡು ಶೈಕ್ಷಣಿಕ ಸಾಲಿನಲ್ಲಿ ದಾಖಲಾಗಿರುವ 200 ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ಈ ಸಾಲಿನ 100 ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆಗೆ ಬೇಕಾದ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಸುಸಜ್ಜಿತವಾಗಿ ನೂತನ ಕಟ್ಟಡದಲ್ಲಿ ಒದಗಿಸಲಾಗುವುದು. ಈಗಾಗಲೇ ಈ ಕಾಲೇಜನ್ನು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳು ಹೆಚ್ಚಿನ ಆತಂಕ ಪಡುವ ಅಗತ್ಯವಿಲ್ಲ. ಎಂದು ಮಾಹಿತಿ ನೀಡಿದರು. ಈ ವರ್ಷ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಕನಕಪುರದಲ್ಲಿ ಸ್ಥಾಪಿಸಲು ಚಿಂತಿಸಲಾಗಿದೆ ಎಂದು ಸಚಿವರು ಈ ವೇಳೆ ತಿಳಿಸಿದರು.
ಈಗಿರುವ ಜಿಲ್ಲಾಸ್ಪತ್ರೆಗೆ mri ಸ್ಕ್ಯಾನಿಂಗ್ ಯಂತ್ರವನ್ನು ಸದ್ಯದಲ್ಲೇ ಒದಗಿಸಲಾಗುತ್ತದೆ.ಹಳೆ ಆಸ್ಪತ್ರೆಯಲ್ಲಿರುವ ct ಸ್ಕ್ಯಾನಿಂಗ್ ಯಂತ್ರವನ್ನು ಈಗಿನ ಜಿಲ್ಲಾಸ್ಪತ್ರೆಗೆ ವರ್ಗಾವಣೆ ಮಾಡಲಾಗುತ್ತದೆ. ನಂತರದ ದಿನಗಳಲ್ಲಿ ಜಿಲ್ಲಾಸ್ಪತ್ರೆಯನ್ನು ಸಹ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಹಂತ ಹಂತವಾಗಿ ವರ್ಗಾಯಿಸಲಾಗುತ್ತದೆ. ಒಟ್ಟಾರೆ ಪೂರ್ಣ ಪ್ರಮಾಣದಲ್ಲಿ ಅಂದರೆ ಎಲ್ಲಾ ಶೈಕ್ಷಣಿಕ ಸಾಲಿನ ನಾಲ್ಕೂ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು ಕಲಿಯುವಂತಹ ಸರ್ಕಾರಿ ವೈದ್ಯಕೀಯ ಕಾಲೇಜು ನೂತನ ಕಟ್ಟಡದಲ್ಲಿ ಆರಂಭವಾಗಲು 5 ವರ್ಷ ತೆಗೆದುಕೊಳ್ಳುತ್ತದೆ ಆ ಕಾರ್ಯಗಳು ಹಂತ ಹಂತವಾಗಿ ನಡೆಯಲಿದೆ ಎಂದು ತಿಳಿಸಿದರು.
ಈ ವೇಳೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಮಾತನಾಡಿ, ವಿಶ್ವೇಶ್ವರಯ್ಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಪಾರ್ ಸೂಪರ್ ಟ್ರೈನರ್ಸ್ ಸಂಸ್ಥೆಯ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಈ ವರ್ಷಾಂತ್ಯದಲ್ಲಿ ಆರಂಭಿಸಲು ಚಿಂತಿಸಲಾಗಿದೆ. ಮುಂದಿನ ವರ್ಷದ ಮಾರ್ಚ್ ವೇಳೆಗೆ ಪೂರ್ಣಕಾಲಿಕವಾಗಿ ಆರಂಭಿಸಲಾಗುವುದು. ಈ ಸಂಸ್ಥೆಯು ಖಾಸಗಿ ಸಹಭಾಗಿತ್ವದಲ್ಲಿ ಪಿ.ಪಿ.ಪಿ ಮಾದರಿಯಲ್ಲಿ 10 ಎಕರೆ ಜಾಗದಲ್ಲಿ ನಿರ್ಮಾಣವಾಗುತ್ತಿದೆ. ಸರ್ಕಾರ ಮಂಜೂರು ಮಾಡಿರುವ 14.9 ಕೋಟಿ ಅನುದಾನದ ಜೋತೆಗೆ 4.35 ಕೋಟಿ ಅನುದಾನವನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ವಿವಿಧ ಕೌಶಲ್ಯಗಳಲ್ಲಿ ನೈಪುಣ್ಯತೆ ಹೊಂದಿರುವ ತಜ್ಞರಿಗೆ ನೂತನ ನಾವಿನ್ಯತೆಯ ಕೌಶಲ್ಯಗಳ ಬಗ್ಗೆ ತರಬೇತಿ ನೀಡುವ ಕೇಂದ್ರವಾಗಲಿದೆ . ಬ್ಯಾಚುಲರ್ ಆಫ್ ಇಂಜಿನಿಯರಿಂಗ್, ಡಿಪ್ಲೋಮ ಸೇರಿದಂತೆ ಇನ್ನಿತರ ವೃತ್ತಿಪರ ಪದವಿ ಹೊಂದಿರುವವರಿಗೆ ತರಬೇತಿ ನೀಡಲು ಕೂಡ ಚಿಂತಿಸಲಾಗಿದೆ. ಉದ್ಯೋಗದಾತ ಕಂಪನಿಗಳು ಇತ್ತೀಚಿಗೆ ಅನುಭವ ಹೊಂದಿರುವವರಿಗೆ ಮಾತ್ರ ಅವಕಾಶ ನೀಡುತ್ತಿರುವುದರಿಂದ ನೂತನವಾಗಿ ಪದವಿ ಪಡೆದವರಿಗೆ ಉದ್ಯೋಗ ಪಡೆಯುವುದು ಸವಾಲಾಗಿದೆ. ಆ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಈ ಕೇಂದ್ರದಲ್ಲಿ ತರಬೇತಿ ನೀಡಲಾಗುವುದು. ಒಟ್ಟಾರೆ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ನಿರ್ದೇಶಕ ಶ್ರೀನಿವಾಸ್,ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಕಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಸರ್ಕಾರಿ ಮೆಡಿಕಲ್ ಕಾಲೇಜಿನ ಡೀನ್ ಮಂಜುನಾಥ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಸ್ ಎಸ್ ಮಹೇಶ್ ಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕಿ ಮಂಜುಳಾದೇವಿ, ವಿವಿಧ ಕಾಮಗಾರಿಗಳ ಯೋಜನಾ ಅಭಿಯಂತರರು ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.