ಚಿಕ್ಕಬಳ್ಳಾಪುರ ಸದ್ಗುರು ಸನ್ನಿಧಿಗೆ 4 ಲಕ್ಷ ಜನರ ಭೇಟಿ

default

ಚಿಕ್ಕಬಳ್ಳಾಪುರ. ಮಾ. ೧೬- ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿ ನಡೆದ ಈಶ ಮಹಾಶಿವರಾತ್ರಿ ಆಚರಣೆಗೆ ಅಭೂತಪೂರ್ವ ಸ್ಪಂದನೆ ದೊರೆತಿದ್ದು, ಮಾರ್ಚ್ ೮ ರಿಂದ ೧೦ ರ ನಡುವೆ ೪ ಲಕ್ಷಕ್ಕೂ ಹೆಚ್ಚು ಜನರನ್ನು ಸೆಳೆಯಿತು. ಆಚರಣೆಯ ದಿನದಂದು, ಅಂದರೆ ಮಾರ್ಚ್ ೮ರ ಬೆಳಿಗ್ಗೆ ೮ ಗಂಟೆಯಿಂದ ಮಾರ್ಚ್ ೯ರ ಬೆಳಿಗ್ಗೆ ೮ ಗಂಟೆಯ ನಡುವೆ ಸುಮಾರು ಎರಡೂವರೆ ಲಕ್ಷ ಜನರು ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ಮಹಾಶಿವರಾತ್ರಿಯ ಮರುದಿನವಾದ ಒಂದು ಲಕ್ಷಕ್ಕೂ ಹೆಚ್ಚು ಜನರು ನೆರೆದಿದ್ದರು, ಮತ್ತು ಉಳಿದ ಜನಸಮೂಹ ಮಾರ್ಚ್ ೧೦ ರಂದು ಆಗಮಿಸಿದರು.
ಸದ್ಗುರು ಸನ್ನಿಧಿಗೆ ಈ ಜನಸಾಗರ ಹರಿದು ಬಂದಿದ್ದರೂ, ಆಚರಣೆಯ ಏರ್ಪಾಡುಗಳು ಸುಸೂತ್ರವಾಗಿ ನಡೆದವು. ಮತ್ತು ಸ್ಥಳೀಯ ಆಡಳಿತ ಮಂಡಳಿಗಳ ಬೆಂಬಲವೂ ದೊರೆಯಿತು. ಸುಮಾರು ೨೦೦ ಪೊಲೀಸರ ಪಡೆ, ೨೦೦ ಹೋಮ್ ಗಾರ್ಡ್ಸ್ ಪಡೆ, ೧೭೦ ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ, ಕರ್ನಾಟಕ ರಾಜ್ಯ ಹೆಚ್ಚುವರಿ ಪೊಲೀಸ್ ಪಡೆಯ ಸಿಬ್ಬಂದಿ, ಮತ್ತು ಅನೇಕ ಈಶ ಸ್ವಯಂ ಸೇವಕರ ಶ್ರಮದಿಂದ ಕಾರ್‍ಯಕ್ರಮ ಸ್ಪಷ್ಟವಾಯಿತು.
ಕೆ.ಎಸ್.ಆರ್.ಟಿ.ಸಿ. ಯವರು ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಲಕ್ಸುರಿ ಬಸ್‌ಗಳನ್ನು ಒಳಗೊಂಡಂತೆ ಅನೇಕ ಬಸ್‌ಗಳ ವ್ಯವಸ್ಥೆ ಮಾಡಿದ್ದರು. ೪೦೦೦ ಕಾರುಗಳು ಮತ್ತು ೫೦೦೦ ದ್ವಿಚಕ್ರ ವಾಹನಗಳಿಗಲ್ಲದೆ, ರಾಜ್ಯದೆಲ್ಲೆಡೆಯಿಂದ ಆಗಮಿಸಿದ್ದ ನೂರಾರು ಕೆ.ಎಸ್.ಆರ್.ಟಿ.ಸಿ.ಮತ್ತುಖಾಸಗಿ ಬಸ್‌ಗಳಿಗೆ ಕೂಡ ಪಾರ್ಕಿಂಗ್‌ವ್ಯವಸ್ಥೆ ಮಾಡಲಾಗಿತ್ತು.
೧೧೨ ಅಡಿ ಎತ್ತರ ಆದಿಯೋಗಿಯ ಭವ್ಯ ಸನ್ನಿಧಿ, ಯೋಗೇಶ್ವರ ಲಿಂಗ, ನಾಗ ಮಂಟಪ, ಜಾತ್ರೆ, ಈಶ ಗೋಶಾಲೆಯ ಸ್ಥಳೀಯ ತಳಿಗಳ ಪ್ರದರ್ಶನ, ಎಲ್ಲವೂ ಜೊತೆಗೂಡಿ ಜನಸಾಗರವೇ ಹರಿದು ಬಂದಿತ್ತು.
ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ ಶುಕ್ರವಾರ ಸಂಜೆ ೬ ರಿಂದ ಶನಿವಾರ ಬೆಳಿಗ್ಗೆ ೬ ರ ವರೆಗೆ ನಡೆದ ವೈಭವಯುತ ಮಹಾಶಿವರಾತ್ರಿ ಆಚರಣೆಯನ್ನು ಬೃಹತ್ಸ್ಕ್ರೀನ್ಗಳಲ್ಲಿ ನೇರಪ್ರಸಾರದ ಮೂಲಕ ಸದ್ಗುರು ಸನ್ನಿಧಿಯಲ್ಲಿ ಪ್ರದರ್ಶಿಸಲಾಯಿತು. ಸದ್ಗುರುಗಳುನಡೆಸಿಕೊಟ್ಟ ಮಧ್ಯರಾತ್ರಿಯ ಧ್ಯಾನದಲ್ಲಿ ಎಪ್ಪತ್ತು ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದು ಒಂದು ಅದ್ಭುತ ದೃಶ್ಯವಾಗಿತ್ತು. ಇದು ಮಹಾಶಿವರಾತ್ರಿ ಆಚರಣೆಯ ಪ್ರಧಾನ ಅಂಶವಾಗಿತ್ತು, ಮತ್ತು ಎಲ್ಲರೂ ಈ ರಾತ್ರಿಯ ಆಧ್ಯಾತ್ಮಿಕ ಸಾಧ್ಯತೆಯನ್ನು ಬಳಸಿಕೊಳ್ಳಲು ಒಂದು ಅವಕಾಶವಾಗಿತ್ತು.
ಆದಿಯೋಗಿಯ ಪಕ್ಕದಲ್ಲೇ ಏರ್ಪಡಿಸಿದ್ದ ಸಾಂಪ್ರದಾಯಿಕ
ಜಾತ್ರೆಯು ಸನ್ನಿಧಿಯ ಸುತ್ತಲಿನ ಸ್ಥಳೀಯ ಸಮುದಾಯಗಳನ್ನು ಆಕರ್ಷಿಸಿತು. ಹಳ್ಳಿಗರು ಮುಂದೆ ಬಂದು ೨೫ ವಿವಿಧ ಸ್ಟಾಲ್‌ಗಳನ್ನು ನಿರ್ಮಿಸಿದ್ದರು, ಮತ್ತು ಸ್ಥಳೀಯ ತಿನಿಸು, ಬಟ್ಟೆ, ಪಾತ್ರೆ ಇತ್ಯಾದಿಗಳ ಸಾಂಸ್ಕೃತಿಕ ಪ್ರದರ್ಶನವನ್ನು ಏರ್ಪಡಿಸಿದ್ದರು. ಮೂರು ದಿನಗಳುದ್ದಕ್ಕೂ ಇಲ್ಲಿ ಅನೇಕ ರೀತಿಯ ತಿನಿಸುಗಳು ಲಭ್ಯವಿದ್ದವು, ಮತ್ತು ಬಂದವರು ಸ್ಥಳೀಯ ಸಾಂಪ್ರದಾಯಿಕ ಸಂಸ್ಕೃತಿಯನ್ನು ಅರಿತುಕೊಳ್ಳಲು ಮತ್ತು ಆಸ್ವಾದಿಸಲು ಇದು ವೇದಿಕೆಯಾಯಿತು.