ಚಿಕ್ಕಬಳ್ಳಾಪುರ: ಶೀಘ್ರ ಬೆಳೆ ಸಮೀಕ್ಷೆ ನಡೆಸಿ, ರೈತರಿಗೆ ನ್ಯಾಯಯುತ ಪರಿಹಾರ ತಲುಪಿಸಿ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚನೆ

ಚಿಕ್ಕಬಳ್ಳಾಪುರ ಸೆಪ್ಟೆಂಬರ್ 20:
ಬರಪೀಡಿತ ತಾಲೂಕುಗಳಲ್ಲಿ ಅಧಿಕಾರಿಗಳು ಶೀಘ್ರ ಮತ್ತು ನ್ಯಾಯಬದ್ಧವಾಗಿ ಬೆಳೆ ಸಮೀಕ್ಷೆ ನಡೆಸಿದರೆ ಮಾತ್ರ ರೈತರಿಗೆ ಬೆಳೆ ನಷ್ಟ ತುಂಬಿಕೊಡಲು ಸಾಧ್ಯ. ಆ ನಿಟ್ಟಿನಲ್ಲಿ ಅಧಿಕಾರಿಗಳು ಸೆ.30ರೊಳಗೆ ಬೆಳೆ ಸಮೀಕ್ಷೆ ನಡೆಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದರು.

ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, “ರಾಜ್ಯದ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ (ಮೆಮೊರಾಂಡಮ್) ಸಲ್ಲಿಸುವ ಕೆಲಸವೂ ಪ್ರಗತಿಯಲ್ಲಿದೆ. ಆದರೆ, ತಹಶೀಲ್ದಾರ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಪ್ರತಿ ರೈತನ ಬೆಳೆ ಸಮೀಕ್ಷೆ ನಡೆಸಿ ಆನ್ಲೈನ್ ಮೂಲಕ ದಾಖಲಿಸಬೇಕು. ಆಗಮಾತ್ರ ರೈತರಿಗೆ ನ್ಯಾಯಯುತ ಬೆಳೆ ನಷ್ಟ ಪರಿಹಾರ ನೀಡುವುದು ಸಾಧ್ಯ” ಎಂದು ತಿಳಿಸಿದರು.

“ಜಂಟಿ ಬೆಳೆ ಸಮೀಕ್ಷೆಗೆ ಸೆ.30ರ ವರೆಗೆ ಸಮಯಾವಕಾಶ ಇದೆ. ಬೇಕಿದ್ದರೆ ಮತ್ತಷ್ಟು ಸಮಯಾವಕಾಶ ನೀಡಲಾಗುವುದು. ಆದರೆ, ಒಮ್ಮೆ ಬೆಳೆ ಸಮೀಕ್ಷೆ ಮುಗಿಸಿದ ನಂತರ ಬಿಟ್ಟುಹೋದ ರೈತರ ಹೆಸರನ್ನು ಮತ್ತೆ ಪರಿಹಾರದ ಪಟ್ಟಿಗೆ ಸೇರಿಸುವುದು ಅಸಾಧ್ಯ. ಹೀಗಾಗಿ ಅಧಿಕಾರಿಗಳು ಈಗಲೇ ಬೆಳೆ ಸಮೀಕ್ಷೆಯನ್ನು ಶೇ.100 ರಷ್ಟು ಮಾಡಿ,ದಕ್ಷತೆಯಿಂದ ಮುಗಿಸಬೇಕು. ಬೆಳೆ ಸಮೀಕ್ಷೆಯಿಂದ ಮಾತ್ರ ರೈತರಿಗೆ ಪರಿಹಾರ ನೀಡಲು ಸಾಧ್ಯ” ಎಂದು ಸಚಿವರು ತಾಕೀಕು ಮಾಡಿದರು.

ತಕರಾರು ಪ್ರಕರಣಗಳ ತ್ವರಿತ ವಿಲೇವಾರಿಗೆ ಸೂಚನೆ

ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ತಹಶೀಲ್ದಾರ್ ಹಾಗೂ ಎಸಿ-ಡಿಸಿ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ತಕರಾರು ಪ್ರಕರಣಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, “ಈ ಹಿಂದಿನ ದಿನಗಳಿಗೆ ಹೋಲಿಸಿದರೆ ತಕರಾರು ಪ್ರಕರಣಗಳ ಇತ್ಯರ್ಥ ಚಿಕ್ಕಬಳ್ಳಾಪುರದಲ್ಲಿ ವೇಗ ಪಡೆದಿದೆ. ಇದು ನಿಜಕ್ಕೂ ಆರೋಗ್ಯಕರ ಬೆಳೆವಣಿಗೆ. ಆದರೆ, ಈ ಕೆಲಸ ಮತ್ತಷ್ಟು ವೇಗ ಪಡೆಯಬೇಕು” ಎಂದರು. ಆದರೆ, ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ 3260 ಪ್ರಕರಣಗಳು ಬಾಕಿ ಇದ್ದು, ಈ ಬಗ್ಗೆ ತ್ವರಿತ ಕ್ರಮಕ್ಕೆ ಸೂಚನೆ ನೀಡಿದರು.

ತಹಶೀಲ್ದಾರ್ ನ್ಯಾಯಾಲಯದ ಪೈಕಿ ಚಿಕ್ಕಬಳ್ಳಾಪುರ 84, ಶಿಡ್ಲಘಟ್ಟ 60, ಚಿಂತಾಮಣಿ 91, ಬಾಗೇಪಲ್ಲಿ 120, ಗುಡಿಬಂಡೆ 26, ಗೌರಿಬಿದನೂರು 138 ಸೇರಿದಂತೆ ಒಟ್ಟು 519 ಪ್ರಕರಣಗಳು ಇನ್ನೂ ಬಾಕಿ ಇದೆ. ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ 454 ತಕರಾರು ಪ್ರಕರಣಗಳ ಬಾಕಿ ಇದೆ. ಆದರೆ, ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ 3,260 ಪ್ರಕರಣಗಳು ಬಾಕಿ ಇದೆ. ಕಳೆದ 2 ರಿಂದ 5 ವರ್ಷಗಳ ಹಳೆಯ ಪ್ರಕರಣಗಳು ಇನ್ನೂ ವಿಲೇವಾರಿಯಾಗದಿದ್ದರೆ ಏನು ಅರ್ಥ? ನೀವು ಜನರಿಗಾಗಿ ಕೆಲಸ ನಿರ್ವಹಿಸುತ್ತಿದ್ದಾರ? ಎಂದು ಪ್ರಶ್ನೆ ಮಾಡಿದ ಸಚಿವರು, ಸರ್ಕಾರ ನೂರು ದಿನ ಪೂರೈಸಿದೆ. ಸರ್ಕಾರಕ್ಕೆ ಒಳ್ಳೆಯ ಹೆಸರು ತರುವಲ್ಲಿ ಕಂದಾಯ ಇಲಾಖೆಯ ಪಾತ್ರ ಹಿರಿದು. ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳೂ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕು” ಎಂದು ಕಿವಿಮಾತು ಹೇಳಿದರು.

ಆಡಳಿತ ವ್ಯವಸ್ಥೆಯಲ್ಲಿ ಅವ್ಯವಸ್ಥೆಯೇ ಮನೆಮಾಡಿದ್ದರೆ ಏನು ಉಪಯೋಗ? ತಕರಾರು ಪ್ರಕರಣಗಳ ವಿಲೇವಾರಿಗೆ ಜನ ಪ್ರತಿನಿತ್ಯ ಸರ್ಕಾರಿ ಕಚೇರಿಗೆ ಎಡತಾಕಬೇಕಾ? ಅಲ್ಲದೆ, ಈ ಎಲ್ಲಾ ಪ್ರಕರಣಗಳನ್ನೂ ಶೀಘ್ರದಲ್ಲೇ ವಿಲೇವಾರಿ ಮಾಡಬೇಕು.
ಟಪಾಲಿನ ಮೂಲಕ ಬಂದ, ಸರಿಯಾದ ದಾಖಲೆಗಳಿಲ್ಲದ ಸಿವಿಲ್ ಸ್ವರೂಪದ ಪ್ರಕರಣಗಳನ್ನು ತಕರಾರು ಪ್ರಕರಣಗಳಾಗಿ ದಾಖಲಿಸಬಾರದು. ದಾಖಲಾದ ಪ್ರತಿಯೊಂದು ಪ್ರಕರಣವನ್ನು ಸರಾಸರಿ ಒಂದು ವಾರದಲ್ಲಿ ಇತ್ಯರ್ಥಗೊಳಿಸಬೇಕು. ಆ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕ್ರಮವಹಿಸಬೇಕು. ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿ ನ್ಯಾಯಾಲಯಗಳು ವಾರದಲ್ಲಿ ಕನಿಷ್ಟ ನಾಲ್ಕು ದಿನ ಕಾರ್ಯ ನಿರ್ವಹಿಸಬೇಕು. ಎಲ್ಲಾ ಬಾಕಿ ಪ್ರಕರಣಗಳನ್ನೂ ಶೀಘ್ರ ವಿಲೇವಾರಿಗೆ ಒತ್ತು ನೀಡಬೇಕು. ಆದರೆ, ಶೀಘ್ರ ವಿಲೇ ನೆಪದಲ್ಲಿ ಗುಣಮಟ್ಟದ ಜೊತೆಗೆ ಹೊಂದಾಣಿಕೆ ಇಲ್ಲ ಎಂದು ಅವರು ತಿಳಿಸಿದರು. ಜೊತೆಗೆ ವಿಚಾರಣೆಯಾಗಿ ಆದೇಶಕ್ಕಾಗಿ ಕಾಯ್ದಿರಿಲ್ಪಟ್ಟ ಪ್ರಕರಣಗಳ ಕುರಿತು ತುರ್ತು ಆದೇಶ ಹೊರಡಿಸಬೇಕು” ಎಂದು ತಾಕೀತು ಮಾಡಿದರು.
ಜೆ ಸ್ಲಿಪ್ ಫೌತಿ ಖಾತೆ ಪ್ರಕರಣ ಹೊರತುಪಡಿಸಿ ಉಳಿದೆಲ್ಲ ಪ್ರಕರಣಗಳಲ್ಲಿ ಆಟೋ ಮ್ಯುಟೇಷನ್ ಆಗುವುದು ಅವಶ್ಯಕತೆ ಇದ್ದು, ಸದರಿ ಕ್ರಮವನ್ನು ಅಕ್ಟೋಬರ್ ಒಂದರಿಂದ ಜಾರಿಗೊಳಿಸುವಂತೆಯೂ ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು.

ಬಾಕಿ ಕಾಮಗಾರಿಗಳಿಗೆ ಗಡುವು!

ಸಾರ್ವಜನಿಕ ಆಸ್ತಿಗಳಿಗೆ ಉಂಟಾಗಿರುವ ಹಾನಿ ದುರಸ್ಥಿಗೆ 2019 ರಿಂದ 2022 ರ ಅವಧಿಯಲ್ಲಿ ಮಂಜೂರಾಗಿ ಇನ್ನೂ ಪೂರ್ಣಗೊಳ್ಳದ ಕಾಮಗಾರಿಗಳನ್ನು(ಕೊರೋನಾ ಸೇರಿದಂತೆ) ಮುಂದಿನ 15 ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2020-21ರಲ್ಲಿ ಮಂಜೂರಾದ 2.4 ಕೋಟಿ ರೂ. ಮೌಲ್ಯದ ಕಾಮಗಾರಿಗಳು ಈವರೆಗೆ ಮುಗಿದಿಲ್ಲ. ಮಳೆಯ ಕಾರಣಕ್ಕೆ ಹಾನಿಯಾದ ಮನೆ ರಿಪೇರಿಗೆ ಈವರೆಗೆ ಹಣ ಬಿಡುಗಡೆಯಾಗಿಲ್ಲ ಎಂದರೆ ಏನರ್ಥ?ಅಲ್ಲದೆ, ಶಾಲೆ ಅಂಗನವಾಡಿಗೆ ನೀಡಿದ ಹಣವನ್ನೂ ಬಳಸಿಲ್ಲ ಎಂದು ಸಿಡಿಮಿಡಿಗೊಂಡರು. ಅಲ್ಲದೆ, ಮುಂದಿನ ಒಂದು ವಾರದಲ್ಲಿ ಈ ಎಲ್ಲಾ ಕಾಮಗಾರಿಗಳೂ ಪೂರ್ಣಗೊಳಿಸಬೇಕು, ಸಂಬಂಧಪಟ್ಟ ಕಾಮಗಾರಿಗೆ ಹಣ ಪಾವತಿ ಮಾಡಬೇಕು. ಕಳೆದ ವರ್ಷದ ಬಾಕಿಯನ್ನೂ ಸಂಪೂರ್ಣವಾಗಿ ವಿಲೇವಾರಿ ಮಾಡಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.

ಭೂ ಪರಿವರ್ತನೆ ಪ್ರಕರಣ ಬಾಕಿ ಏಕೆ?
ಮಹಾ ಯೋಜನೆ (ಮಾಸ್ಟರ್ ಪ್ಲ್ಯಾನ್) ಅನುಮೋದಿತ ಪ್ರದೇಶದಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯಾಗಿ ಪರಿವರ್ತನೆಗೆ ಜಿಲ್ಲಾಧಿಕಾರಿಗಳ ಬಳಿ ಹೋಗದೆ ನೇರವಾಗಿ ನಗರ ಯೋಜನಾ ಕಚೇರಿ/ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲಿಸಿ ಪರಿವರ್ತನೆಗೆ ನಿಗದಿತ ಶುಲ್ಕ ಪಾವತಿ ಮಾಡಿ ನಿರಪೇಕ್ಷಣಾ ಪ್ರಮಾಣ ಪತ್ರ ಪಡೆಯಲು ಹೊಸ ತಿದ್ದುಪಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಮಾಸ್ಟರ್ ಪ್ಲ್ಯಾನ್ ನಲ್ಲಿ ಅನುಮೋದಿತವಾಗಿರುವ ಉದ್ದೇಶಕ್ಕಾಗಿಯೇ ಭೂಮಿಯನ್ನು ಉಪಯೋಗಿಸಿಕೊಳ್ಳಲು ಮತ್ತೊಮ್ಮೆ ಭೂ ಪರಿವರ್ತನೆ ಅಗತ್ಯ ಇಲ್ಲ. ಆದರೂ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಷ್ಟೊಂದು ಪ್ರಕರಣಗಳು ಬಾಕಿ ಇರುವುದು ಏಕೆ? ಎಂದು ಪ್ರಶ್ನೆ ಮಾಡಿದ ಸಚಿವರು ನೋಂದಣಿ ತಿದ್ದುಪಡಿ ವಿಧೇಯಕದ ಸಾರಾಂಶವನ್ನುಅಧಿಕಾರಿಗಳಿಗೆ ಮತ್ತೊಮ್ಮೆ ತಿಳಿಹೇಳಿದರು.
ಅಲ್ಲದೆ, “ಸರ್ಕಾರಿ ಮತ್ತು ಖಾಸಗಿ ಆಸ್ತಿಯನ್ನು ಸುಳ್ಳು ಮಾಹಿತಿ ನೀಡಿ, ವಂಚಿಸಿ ಅಥವಾ ಖೊಟ್ಟಿ ದಾಖಲೆ ಸೃಷ್ಟಿಸಿ ದುರಪಯೋಗದ ಮೂಲಕ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೊಂದಾಯಿಸಿರುವುದು ಕಂಡುಬಂದಲ್ಲಿ ಜಿಲ್ಲಾ ನೋಂದಣಾಧಿಕಾರಿಗಳು ಅಂತಹ ಪ್ರಕರಣಗಳು ಕೈಗೆತ್ತಿಕೊಂಡು 3 ತಿಂಗಳ ಒಳಗಾಗಿ ಸದರಿ ದಸ್ತಾವೇಜನ್ನು ರದ್ದುಪಡಿಸುವ ಅಧಿಕಾರ ನೀಡಲಾಗಿದೆ. ಹಾಗೂ ಕರ್ನಾಟಕ (ಕೆಲವು ಜಮೀನುಗಳ ವರ್ಗಾವಣೆ ನಿಷೇಧ) ಕಾಯ್ದೆ-1978ಕ್ಕೆ ತಿದ್ದುಪಡಿ ತಂದು ಎಸ್.ಸಿ.-ಎಸ್.ಟಿ ಜನಾಂಗದವರ ಹಕ್ಕು ರಕ್ಷಿಸಲಾಗಿದೆ. ಇದು ಜನಪರ ಸರ್ಕಾರದ ಜನಪರ ನಿರ್ಧಾರಗಳಾಗಿವೆ.
ಹೀಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಭೂಮಿ ಯನ್ನು ಸರ್ಕಾರದಿಂದ ಮಾರಾಟ ಅನುಮತಿ ಇಲ್ಲದೆ ಮಾರಾಟವಾಗದಂತೆ ನಿರ್ವಹಿಸಬೇಕು. ಇಂತಹ ಜಮೀನುಗಳಿಗೆ ಪೋಡಿ ಮಾಡಿ ಕೊಡುವುದು ನಮ್ಮ ಕರ್ತವ್ಯ. ಈ ಮೂಲಕ ತುಳಿತಕ್ಕೊಳಪಟ್ಟ ಸಮಾಜದ ಜನರ ಭೂ ಹಕ್ಕನ್ನು ನಾವು ಖಚಿತಪಡಿಸಬೇಕು. ಅಧಿಕಾರಿಗಳ ಸಹಕಾರ ಇಲ್ಲದೆ ಸರ್ಕಾರದ ಈ ಮಹತ್ವಾಕಾಂಕ್ಷೆಯ ಉದ್ದೇಶ ಈಡೇರುವುದಿಲ್ಲ” ಎಂದು ಅವರು ತಿಳಿಸಿದರು.

ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ

ಈಗಾಗಲೇ ಬರ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ಬರ ಪೀಡಿತ ತಾಲ್ಲೂಕುಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ಎದುರಾದರೂ ಸಹ 24 ಗಂಟೆಯ ಒಳಗಾಗಿ ಟ್ಯಾಂಕರ್ ಅಥವಾ ಇತರ ವ್ಯವಸ್ಥೆ ಮೂಲಕ ನೀರನ್ನು ತ್ವರಿತವಾಗಿ ಪೂರೈಸಬೇಕು ಎಂದು ಸಚಿವರು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.

ಕುಡಿಯುವ ನೀರಿನ ಪೂರೈಕೆಗೆ ಜಿಲ್ಲಾಡಳಿತ ಮೊದಲ ಪ್ರಾಶಸ್ತ್ಯ ನೀಡಬೇಕು. ಜಿಲ್ಲೆಯಲ್ಲಿ ಯಾವ ಜಾಗದಲ್ಲಿ ನೀರಿನ ಸಮಸ್ಯೆ ಕಂಡುಬಂದರೂ ಸಹ 24 ಗಂಟೆಯಲ್ಲೇ ಟ್ಯಾಂಕರ್ ಮೂಲಕ ನೀರನ್ನು ಪೂರೈಕೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ತಿಳಿಸಿದ್ದಾರೆ. ಹೀಗಾಗಿ ಈಗಲೇ ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆಗೆ ಪಡೆದುಕೊಳ್ಳಿ ನೀರಿನ ಬೇಡಿಕೆ ಬಂದಕೂಡಲೇ ಟ್ಯಾಂಕರ್ ಮೂಲಕ ನೀರನ್ನು ಪೂರೈಸಿ ಎಂದರು.
ಕುಡಿಯುವ ನೀರಿಗೆ ತಹಶೀಲ್ದಾರ್ ಹಾಗೂ ಡಿಸಿ ಖಾತೆಯಲ್ಲಿ ಈಗಾಗಲೇ ಸುಮಾರು 22.00 ಕೋಟಿ ಹಣ ಇದೆ. ಅವಶ್ಯಕತೆಗೆ ಅನುಗುಣವಾಗಿ ಎಸ್. ಡಿ.ಆರ್.ಎಫ್ ಹಣವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಬೆಳೆ ಮಾಹಿತಿಯನ್ನು “ಫ್ರೂಟ್ಸ್” ಆ್ಯಪ್ ನಲ್ಲಿ ನಮೂದಿಸಿ
ಕೃಷಿ ಬೆಳೆ, ತೋಟಗಾರಿಕೆ ಬೆಳೆ, ರೇಷ್ಮೆ ಕೃಷಿ ಸೇರಿದಂತೆ ಎಲ್ಲಾ ಬೆಳೆಗಳ ಮಾಹಿತಿಯನ್ನು ದಾಖಲಿಸಲು ಸರ್ಕಾರ ಎನ್ಐಸಿಯ ಸಹಯೋಗದೊಂದಿಗೆ “ಫ್ರೂಟ್ಸ್ ಆ್ಯಪ್” (FRUITS APP) ಅನ್ನು ಅಭಿವೃದ್ಧಿಪಡಿಸಿದೆ. ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆಗಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ವಿಸ್ತೀರ್ಣದ ಮಾಹಿತಿಯನ್ನೂ ಅಧಿಕಾರಿಗಳು ಈ ಆ್ಯಪ್ ನಲ್ಲಿ ದಾಖಲಿಸಬೇಕು ಎಂದು ಸಭೆಯಲ್ಲಿ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ, ಆಯುಕ್ತರಾದ ಸುನಿಲ್ ಕುಮಾರ್, ಭೂದಾಖಲೆಗಳ ಇಲಾಖೆಯ ಆಯುಕ್ತರಾದ ಜೆ. ಮಂಜುನಾಥ್, ಶಾಸಕರಾದ ಕೆ.ಹೆಚ್.ಪುಟ್ಟಸ್ವಾಮಿ ಗೌಡ, ರವಿಕುಮಾರ್, ಪ್ರದೀಪ್ ಈಶ್ವರ್ ಅಯ್ಯರ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಅಪರ ಜಿಲ್ಲಾಧಿಕಾರಿ ಡಾ|| ಎನ್. ತಿಪ್ಪೇಸ್ವಾಮಿ, ಜಿ. ಪಂ ಉಪಕಾರ್ಯದರ್ಶಿ ಡಾ. ಎನ್ ಭಾಸ್ಕರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.