ಚಿಕ್ಕನಗೌಡರ ಸಂಭ್ರಮದ ಜನ್ಮದಿನಾಚರಣೆ


ಕುಂದಗೋಳ ಮಾ. 2 : ಪಕ್ಷ ಸಂಘಟನೆ, ಅಭಿವೃದ್ಧಿ ಶ್ರಮಿಕ, ಸರಳ-ಸಜ್ಜನಿಕೆಯ ಮಾಜಿ ಶಾಸಕ ಎಸ್. ಐ. ಚಿಕ್ಕನಗೌಡ್ರ ಸದಾ ಜನಸೇವಕರಾಗಿರಲಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆಶಿಸಿದರು.
ಕುಂದಗೋಳ ಜೆಎಸ್‍ಎಸ್ ವಿದ್ಯಾಪೀಠ ಶಾಲಾವರಣದಲ್ಲಿ ನಡೆದ ಚಿಕ್ಕನಗೌಡ್ರ ಅವರ 71ನೇ ಹುಟ್ಟು ಹಬ್ಬದ ನಿಮಿತ್ತ ಅವರಿಗೆ ಶೆಟ್ಟರ್ ಅವರು ಕೇಕ್ ತಿನ್ನಿಸಿ ಶುಭಹಾರೈಸುತ್ತ, ನಾನು ಬಿಜೆಪಿ ಜಿಲ್ಲಾಧ್ಯಕ್ಷ ಇದ್ದಾಗ ಚಿಕ್ಕನಗೌಡ್ರ ನನಗೆ ತುಂಬಾ ಸಾಥ್ ನೀಡಿ, ಪಕ್ಷ ಬಲವರ್ಧನೆ, ಸಂಘಟನೆಗೆ ಶ್ರಮಿಸಿ 3 ಬಾರಿ ಶಾಸಕರಾಗಿ ಕೈಬೆರಳೆಣಿಕೆಯಷ್ಟಿದ್ದ ಕಾರ್ಯಕರ್ತರನ್ನು ಸಾವಿರಾರಿಗೆ ಹೆಚ್ಚಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹಳೆಯ ನೆನಪು ಮೆಲುಕು ಹಾಕಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ ಅವರು ಮಾತನಾಡಿ ಚಿಕ್ಕನಗೌಡರು ಶಾಸಕರಾಗಿದ್ದಾಗ ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆ, ಸವಾಯಿ ಗಂಧರ್ವವರ ಸ್ಮಾರಕ ಭವನ, ಅಗ್ನಿ ಶಾಮಕ ಕಟ್ಟಡ, ನೂತನ ಪೆÇೀಲೀಸ್ ಠಾಣೆ ಕಟ್ಟಡ ನಿರ್ಮಾಣ ಸೇರಿದಂತೆ ಕುಂದಗೋಳ ಮತಕ್ಷೇತ್ರದ ಉದ್ದಗಲಕ್ಕೂ ಅನೇಕ ಕೆಲಸ ಕಾಮಗಾರಿಗಳನ್ನು ಮಾಡಿದ್ದು, ಇನ್ನೂ ಕೂಡಾ ಸಾರ್ವಜನಿಕ ಕಾರ್ಯಗಳಿಗೆ ಬಿಡುವಿಲ್ಲದೆ ಮಕ್ಕಳಂತೆ ಓಡಾಡುವ ಅವರಿಗೆ 71 ನೇ ಜನ್ಮ ದಿನ ಸಂದರ್ಭದಲ್ಲಿ ಶುಭವಾಗಲಿ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಎಸ್, ಆಯ್, ಚಿಕ್ಕನಗೌಡ್ರ ಮಾತನಾಡಿ ಮುಂಬರುವ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಲು ಕುಂದಗೋಳ ಮತಕ್ಷತ್ರಕ್ಕೆ ಬಿಜೆಪಿ ಟಿಕೇಟ್ ನೀಡಲು ವರಿಷ್ಠರಿಗೆ ಕೈ ಮುಗಿಯುತ್ತೇನೆ ಎಂದು ವೇದಿಕೆ ಮೇಲೆಯೇ ನಮಸ್ಕಾರ ಮಾಡಿದರು.
ಶಿರಹಟ್ಟಿ ಫಕ್ಕೀರ ಸಿದ್ದರಾಮ ಶ್ರೀಗಳು, ಪಟ್ಟಣದ ಪಂಚಗ್ರಹ ಹಿರೇಮಠ ಶಿತಿಕಂಠೇಶ್ವರ ಶ್ರೀಗಳು, ಮುಳ್ಳೊಳ್ಳಿಯ ಶಿವಯೋಗಿ ಶ್ರೀಗಳು, ಶಿವಾನಂದ ಮಠದ ಮಲ್ಲಯ್ಯಜ್ಜನವರು ಮತ್ತು ಮಹಾಂತ ಶ್ರೀಗಳು, ಕಲ್ಯಾಣಪೂರದ ಅಭಿನವ ಬಸವಣ್ಣಜ್ಜನವರು ಆರ್ಶಿವಚನ ನೀಡಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಗೌರವಿಸಿ-ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ಪ ಪಂ ಸದಸ್ಯ ಮಲ್ಲಿಕಾರ್ಜುನ ಕಿರೇಸೂರ, ಗುರು ಪಾಟೀಲ, ಗದಿಗೆಪ್ಪ ಕಳ್ಳಿಮನಿ, ದಾನಪ್ಪ ಗಂಗಾಯಿ, ಶಂಕರಗೌಡ ನಿರಂಜನಗೌಡ್ರ, ವೈ. ಜಿ. ಪಾಟೀಲ, ಡಿ. ವೈ. ಲಕ್ಕನಗೌಡ್ರ ಸೇರಿದಂತೆ ಸಾವಿರಾರು ಅಭಿಮಾನಿಗಳಿದ್ದರು.