ಚಿಕಿತ್ಸಾ ಕೇಂದ್ರಾಲಯಕ್ಕೆ ಜಿಲ್ಲಾಧಿಕಾರಿಗಳ ಭೇಟಿ

ಚಾಮರಾಜನಗರ, ಏ.25- ಚಾಮರಾಜನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನ ಒಂದು ಭಾಗದಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಕೇಂದ್ರವನ್ನು ತಾತ್ಕಾಲಿವಾಗಿ ಸಜ್ಜುಗೊಳಿಸುವ ಸಿದ್ದತೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಸೂಚಿಸಿದರು.
ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಹಿರಿಯ ವೈದ್ಯಾಧಿಕಾರಿಗಳೊಂದಿಗೆ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಯವರು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಮತ್ತೊಂದು ಕೇಂದ್ರವನ್ನು ತುರ್ತಾಗಿ ಆರಂಭಿಸುವ ಸಂಬಂಧ ಪರಿಶೀಲನೆ ನಡೆಸಿದರು.
ಜಿಲ್ಲಾ ಕೋವಿಡ್ ಆಸ್ಪತ್ರೆ ಹೊರತುಪಡಿಸಿ ಸೊಂಕಿತರಿಗಾಗಿ ಅಗತ್ಯವಿರುವ ಚಿಕಿತ್ಸಾ ಕೇಂದ್ರಗಳನ್ನು ಸಜ್ಜಾಗಿಟ್ಟುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ವೈದ್ಯಕೀಯ ಕಾಲೇಜಿನ ಒಂದು ಭಾಗದಲ್ಲಿ ಈ ಹಿಂದೆ ವ್ಯವಸ್ಥೆಗೊಳಿಸಲಾಗಿದ್ದ ಪರಿಕರಗಳೊಂದಿಗೆ ಚಿಕಿತ್ಸಾ ಕೇಂದ್ರವನ್ನು ಆರಂಭಿಸಲು ಎಲ್ಲಾ ಬಗೆಯ ಸಿದ್ದತೆಯನ್ನು ಕೂಡಲೇ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರು ತಿಳಿಸಿದರು.
ಈ ಹಿಂದೆ ಕಾಲೇಜಿನಲ್ಲಿ ಕೋವಿಡ್ ಕೇಂದ್ರ ಆರಂಭಿಸಿದ್ದ ಸಮಯದಲ್ಲಿ ಖರೀದಿಸಲಾಗಿರುವ ಹಾಸಿಗೆಗಳು, ಇತರೆ ಪೀಠೋಪಕರಣಗಳನ್ನು ಪ್ರಸ್ತುತ ನಡೆಸಲಾಗುವ ಕೋವಿಡ್ ಚಿಕಿತ್ಸಾ ಕೇಂದ್ರಕ್ಕಲೂ ಬಳಸಿಕೊಳ್ಳಬೇಕು. ಉಳಿದಂತೆ ಅಮ್ಲಜನಕ ಸೌಲಭ್ಯವುಳ್ಳ ಹಾಸಿಗೆ, ಕೋವಿಡ್ ರೋಗಿಗಳ ಚಿಕಿತ್ಸೆ ಆರೈಕೆಗಾಗಿ ಅವಶ್ಯಕವಿರುವ ಇತರೆ ಎಲ್ಲಾ ಸೌಲಭ್ಯಗಳ ಅಳವಡಿಕೆಗೆ ಕ್ರಮ ತೆಗೆದುಕೊಳ್ಳಬೇಕೆಂದು ನಿರ್ದೇಶನ ನೀಡಿದರು.
ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ವೈದ್ಯರನ್ನು ನಿಯೋಜನೆ ಮಾಡಬೇಕು. ಇತರೆ ಆರೋಗ್ಯ ಸಿಬ್ಬಂದಿ ನೇಮಕಕ್ಕೂ ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸಬೇಕು. ರೋಗಿಗಳಿಗೆ ಕೋವಿಡ್ ಮಾರ್ಗಸೂಚಿ ಅನುಸಾರ ನಿಗದಿಪಡಿಸಿರುವ ಮೆನು ಪ್ರಕಾರವೇ ಆಹಾರ ನೀಡುವ ವ್ಯವಸ್ಥೆಯನ್ನು ಮಾಡಬೇಕು. ಯಾವುದೇ ಕೊರತೆ ಬಾರದಂತೆ ಎಲ್ಲಾ ಸಿದ್ದತಾ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಇದಕ್ಕೂ ಮೊದಲು ನಿರ್ಮಾಣ ಪೂರ್ಣಗೊಳ್ಳುತ್ತಿರುವ ವೈದ್ಯಕೀಯ ಕಾಲೇಜಿನ ಆಸ್ಪತ್ರೆ ಕಟ್ಟಡಕ್ಕೂ ಭೇಟಿ ನೀಡಿದ ಜಿಲ್ಲಾಧಿಕಾರಿಯವರು ಇಲ್ಲಿನ ಕಟ್ಟಡದ ಒಂದು ಭಾಗದ ಮೊದಲೆರಡು ಮಹಡಿಯಲ್ಲಿ 200 ಹಾಸಿಗೆಯುಳ್ಳ ಕೋವಿಡ್ ಚಿಕಿತ್ಸಾ ಕೇಂದ್ರ ಪ್ರಾರಂಭಿಸುವ ಸಂಬಂಧ ಪರಿಶೀಲಿಸಿದರು. ಬಾಕಿ ಉಳಿದಿರುವ ಕೆಲಸವನ್ನು ಶೀಘ್ರ ಪೂರ್ಣಗೊಳಿಸಲು
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ವೈದ್ಯಕೀಯ ಕಾಲೇಜಿನ ನಿರ್ದೇಶಕರು ಹಾಗೂ ಡೀನ್ ಡಾ. ಸಂಜೀವ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ. ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಸುರೇಂದ್ರ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಾರ್ಯಪಾಲಕ ಎಂಜಿನಿಯರ್ ಪೂರ್ಣಚಂದ್ರ, ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ, ಇತರೆ ಅಧಿಕಾರಿಗಳು ಹಾಜರಿದ್ದರು.