ಚಿಕನ್, ಮಟನ್ ಖರೀದಿಗೆ ಮುಗಿಬಿದ್ದ ಜನ

ಮೈಸೂರು: ಏ.25: ವಾರಾಂತ್ಯ ಕಫ್ರ್ಯೂ ಹಿನ್ನೆಲೆಯಲ್ಲಿ ಬೆಳಿಗ್ಗೆ 10ರ ನಂತರ ಅಂಗಡಿಗಳು ತೆರೆಯುವುದಿಲ್ಲ ಎಂದು ಜನರು ಮುಂಜಾನೆಯೇ ಮಾಂಸದಂಗಡಿಗಳಲ್ಲಿ ಚಿಕನ್, ಮಟನ್ ಖರೀದಿಗೆ ಮುಗಿಬಿದ್ದರು.
ಭಾನುವಾರ ಬೆಳಿಗ್ಗೆ ಮಾಂಸದಂಗಡಿಗಳ ಮುಂದೆ ಉದ್ದನೆಯ ಸಾಲು ಮಾಡಿ ಜನರು ಸಾಲು ನಿಂತು ಮಾಂಸ ಖರೀದಿಸಿದರು. ಅಷ್ಟೇ ಅಲ್ಲದೇ, ಹಾಲು ಸೇರಿದಂತೆ ಇತರೆ ಆಹಾರ ಪದಾರ್ಥಗಳನ್ನು ಖರೀದಿಸಲು ಅಂಗಡಿಗಳ ಮುಂದೆ ಜಮಾವಣೆಗೊಂಡ ದೃಶ್ಯಗಳು ಅಲ್ಲಲ್ಲಿ ಕಂಡುಬಂದವು.
ಕೆ.ಜಿ.ಕೊಪ್ಪಲು, ಟಿ.ಕೆ.ಬಡಾವಣೆ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಜನರು ಸಾಲುಗಟ್ಟಿ ಚಿಕನ್, ಮಟನ್ ಖರೀದಿಸಿದರು. ಈ ವೇಳೆ ಕೋವಿಡ್ ನಿಯಮಗಳನ್ನು ಪಾಲನೆಗೆ ಕ್ರಮಕೈಗೊಳ್ಳುವಂತೆ ಸ್ಥಳಗಳಲ್ಲಿ ಪೆÇಲೀಸರನ್ನು ನಿಯೋಜಿಸಲಾಗಿತ್ತು.
ಬೆಳಿಗ್ಗೆ 10 ಗಂಟೆಯ ನಂತರ ಅಂಗಡಿ-ಮುಂಗಟ್ಟುಗಳು ಬಂದ್ ಆದವು. ಹೀಗಾಗಿ, ಬೆಳಿಗ್ಗೆಯೇ ಜನರು ಅಂಗಡಿಗಳಲ್ಲಿ ಮುಗಿಬಿದ್ದು ಮಾಂಸ ಖರೀದಿಸಿದರು.
ಕೆಲವೆಡೆ ಮಾಂಸದಂಗಡಿ ಬಂದ್
ಮಹಾವೀರ ಜಯಂತಿ ಪ್ರಯುಕ್ತ ನಿಷೇಧದ ನಡುವೆಯೂ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳನ್ನು ಪೆÇಲೀಸರು ಕಾರ್ಯಾಚರಣೆ ನಡೆಸಿ ಭಾನುವಾರ ಬಂದ್ ಮಾಡಿಸಿದರು. ಅಲ್ಲದೇ, ಮಾಂಸವನ್ನು ಸೀಜ್ ಮಾಡಿದರು.
ವಾರಾಂತ್ಯ ಕಫ್ರ್ಯೂ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ಗಂಟೆ ನಂತರ ಅಂಗಡಿ ಮುಚ್ಚಿಸಲಾಗುತ್ತದೆ ಎಂದು ಜನರು ಮುಂಜಾನೆಯೇ ಮಾಂಸದಂಡಗಳ ಮುಂದೆ ಸಾಲು ನಿಂತು ಚಿಕನ್, ಮಟನ್ ಖರೀದಿಯಲ್ಲಿ ಬ್ಯುಸಿಯಾಗಿದ್ದರು. ಮಹಾವೀರ ಜಯಂತಿ ಅಂಗವಾಗಿ ನಿಷೇಧ ವಿಧಿಸಿದ್ದರೂ ಮೈಸೂರು ಮಹಾನಗರ ಪಾಲಿಕೆ ಆದೇಶ ಉಲ್ಲಂಘಿಸಿ ಮಾಂಸ ಖರೀದಿ ಮಾಡುತ್ತಿದ್ದರು. ಈ ವೇಳೆ ಕೆ.ಜಿ.ಕೊಪ್ಪಲು ಸೇರಿದಂತೆ ಹಲವೆಡೆ ಪೆÇಲೀಸರು, ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಂಗಡಿಗಳನ್ನು ಮುಚ್ಚಿಸಿದರು.
ಹಲವೆಡೆ ಕೋವಿಡ್ ಮಾರ್ಗಸೂಚಿ ಅನುಸರಿಸದೇ ಮಾಂಸ ಮಾರಾಟ ಮಾಡಲಾಗುತ್ತಿದೆ. ಈ ಅಂಗಡಿಗಳ ಮೇಲೆ ದಾಳಿ ಮಾಡಿ ಮಾಲೀಕರನ್ನು ಪೆÇಲೀಸರು ತರಾಟೆಗೆ ತೆಗೆದುಕೊಂಡರು.
ದೇವರಾಜ ಮಾರುಕಟ್ಟೆ ಬಳಿ ಚಿಕನ್, ಮಟನ್ ಅಂಗಡಿಗಳ ಬಾಗಿಲು ಮುಚ್ಚಿದ್ದವು.
ಮಾಂಸ ಮಾರಾಟಗಾರರಿಗೆ ನಿರಾಸೆ:
ಇಂದು ಭಗವಾನ್ ಮಹಾವೀರರ ಜಯಂತಿ ಇರುವ ನಿಮಿತ್ತ ಸರ್ಕಾರವು ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿರುವ ಹಿನ್ನಲೆಯಲ್ಲಿ ನಗರದಾದ್ಯಂತ ಹೆಚ್ಚು ಕಡಿಮೆ ಎಲ್ಲಾ ಮಾಂಸ, ಮೀನು, ಕೋಳಿ ಮಾಂಸ ಅಂಗಡಿಗಳು ಮುಚ್ಚಿದ್ದರಿಂದ ಮಾಂಸಹಾರಿಗಳಿಗೆ ಬಹಳ ನಿರಾಸೆ ಉಂಟಾದದ್ದು ಒಂದೆಡೆಯಾದರೆ ಮತ್ತೊಂದೆಡೆ ಮಾಂಸ ಮಾರಾಟದ ಅಂಗಡಿಗಳ ಮಾಲೀಕರು ಇಂದಿನ ವ್ಯಾಪಾರ ಸ್ಥಗಿತಗೊಂಡಿರುವುದಕ್ಕೆ ನಿರಾಸೆಗೊಂಡಿದ್ದರು. ಇಂದು ಮಹಾವೀರ ಜಯಂತಿ ಇಲ್ಲದಿದ್ದರೆ ಕದ್ದು ಮುಚ್ಚಿ ಮಾಂಸದ ವ್ಯಾಪಾರ ನಡೆಸಬಹುದಾಗಿತ್ತು ಎಂದು ಮಾಂಸದ ಅಂಗಡಿಗಳ ಮಾಲೀಕರ ಅನಿಸಿಕೆಯಾಗಿತ್ತು ಎಂದು ನಮ್ಮ ಪ್ರತಿನಿಧಿಯೊಂದಿಗೆ ವಿಚಾರ ವಿನಿಮಯ ಮಾಡಿಕೊಂಡರು.