ಬೆಂಗಳೂರು,ಜು.೩೦-ಭಾರೀ ಮಳೆ, ಪ್ರವಾಹದಿಂದಾಗಿ ಚಿಕನ್ ಬೆಲೆ ದಿಢೀರ್ ಕುಸಿತಗೊಂಡಿದ್ದು, ಮಾಂಸಪ್ರಿಯರಿಗೆ ಖುಷಿ ತಂದಿದೆ.
ಮೊನ್ನೆವರೆಗೂ ಕೋಳಿ ಮಾಂಸ ಕೆಜಿಗೆ ೩೦೦ ರೂ ದಾಟುತ್ತಿದ್ದಂತೆಯೇ ಜನರು ಚಿಕನ್ ಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕೋಳಿ ಬೆಲೆ ಗಣನೀಯವಾಗಿ ಇಳಿಕೆಯಾಗಿದ್ದು, ಕರ್ನಾಟಕದಲ್ಲಿ ಕೆಜಿಗೆ ೧೭೦ ರೂನಂತೆ ಮಾರಾಟವಾಗುತ್ತಿದೆ.
ಭಾರೀ ಮಳೆ ಹಾಗೂ ಬೇಡಿಕೆ ಕುಸಿದಿರುವುದೇ ಚಿಕನ್ ಬೆಲೆ ಇಳಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ. ಸದ್ಯ ದೇಶಾದ್ಯಂತ ಟೊಮ್ಯಾಟೋ ಬೆಲೆ ಕೆಜಿಗೆ ೨೦೦ ರೂ ತಲುಪಿದೆ. ಈ ನಡುವೆಯೇ ಈಗ ಚಿಕನ್ ಬೆಲೆ ಇಳಿಕೆಯಾಗಿರುವುದರಿಂದ ಹಲವರು ಟೊಮ್ಯಾಟೋ ಕೊಳ್ಳುವುದಕ್ಕಿಂತ ಚಿಕನ್ ಖರೀದಿಸುವುದೇ ಉತ್ತಮ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
೨೦೦ಕ್ಕಿಂತ ಹೆಚ್ಚು ಖರ್ಚು ಮಾಡಿ ಪ್ಲೇಟ್ ಬಿರಿಯಾನಿ ತಿನ್ನುವುದಕ್ಕಿಂತ ೧೭೦ ರೂ.ಗೆ ಕೆ.ಜಿ ಚಿಕನ್ ಪಡೆದು ಮನೆಯಲ್ಲಿ ಎಲ್ಲರೂ ಸೇರಿ ತಿನ್ನುವುದು ಒಳ್ಳೆಯದು ಎಂಬ ಚರ್ಚೆಯೂ ಸಾಮಾನ್ಯರಲ್ಲಿದೆ.
ಮುಂಬರುವ ತಿಂಗಳುಗಳಲ್ಲಿ ಕೋಳಿಮಾಂಸದ ಬೆಲೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಮಳೆ, ಪ್ರವಾಹದ ಹಿನ್ನೆಲೆಯಲ್ಲಿ ಋತುಮಾನದ ಕಾಯಿಲೆಗಳು ತಲೆದೋರುವ ಈ ಹೊತ್ತಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಕೋಳಿ ಮಾಂಸ ತಿನ್ನುವುದು ಒಳ್ಳೆಯದು ಎಂದು ತಜ್ಞರು ತಿಳಿಸಿದ್ದಾರೆ.